ಹೆಚ್ಚುವರಿ ಎರಡು ಗಂಟೆ ವಿದ್ಯುತ್ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಕೆ.ಜೆ.ಜಾರ್ಜ್

KannadaprabhaNewsNetwork |  
Published : Jan 08, 2025, 12:18 AM IST
೭ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ  ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಇಂಧನ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ರೈತರು ಎರಡನೇ ಬೆಳೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಕಬ್ಬು, ಭತ್ತದ ಬೆಳೆ ರಕ್ಷಣೆಗಾಗಿ ಇನ್ನೂ ೨ ಗಂಟೆಗಳ ಕಾಲ ಹೆಚ್ಚುವರಿ ವಿದ್ಯುತ್‌ನ ಅಗತ್ಯವಿದೆ ಎಂದು ಸೆಸ್ಕ್‌ನ ಅಧ್ಯಕ್ಷರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ವಿದ್ಯುತ್‌ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಬೇಸಿಗೆ ಹಂಗಾಮಿನಲ್ಲಿ ರೈತರ ಬೆಳೆ ರಕ್ಷಣೆಗಾಗಿ ೫ ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದ್ದು, ಹೆಚ್ಚುವರಿ ಇನ್ನೂ ೨ ಗಂಟೆಗಳ ಹೆಚ್ಚಿನ ವಿದ್ಯುತ್ ಪೂರೈಕೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಇಂಧನ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ರೈತರು ಎರಡನೇ ಬೆಳೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಕಬ್ಬು, ಭತ್ತದ ಬೆಳೆ ರಕ್ಷಣೆಗಾಗಿ ಇನ್ನೂ ೨ ಗಂಟೆಗಳ ಕಾಲ ಹೆಚ್ಚುವರಿ ವಿದ್ಯುತ್‌ನ ಅಗತ್ಯವಿದೆ ಎಂದು ಸೆಸ್ಕ್‌ನ ಅಧ್ಯಕ್ಷರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ವಿದ್ಯುತ್‌ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದೇವೆ ಎಂದರು.

ರಾಜ್ಯದಲ್ಲಿ ೪.೫ ಲಕ್ಷ ಅಕ್ರಮ ಐಪಿ ಸೆಟ್:

೨೦೦೪ರಿಂದಲೂ ರಾಜ್ಯದಲ್ಲಿ ೪.೫ ಲಕ್ಷ ಅಕ್ರಮ ಐ.ಪಿ.ಸೆಟ್‌ಗಳಿದ್ದು, ಇವುಗಳ ಸಕ್ರಮಕ್ಕೆ ಯಾವುದೇ ಸರ್ಕಾರಗಳು ಕ್ರಮ ಕೈಗೊಂಡಿರಲಿಲ್ಲ. ತಾವು ಇಂಧನ ಖಾತೆ ಸಚಿವರಾದ ಬಳಿಕ ಸಂಪುಟದಲ್ಲಿ ೪.೫ ಲಕ್ಷ ಅಕ್ರಮ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲ ಸೌಲಭ್ಯ ಒದಗಿಸಲು ಅನುಮತಿ ಪಡೆಯಲಾಗಿತ್ತು. ನಂತರ ೨.೫ ಲಕ್ಷ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಉಳಿದ ೨ ಲಕ್ಷ ಐಪಿ ಸೆಟ್‌ಗಳನ್ನು ಒಂದು ವರ್ಷದೊಳಗೆ ಸಕ್ರಮಗೊಳಿಸಿ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮಂಡ್ಯದಲ್ಲಿ ೧.೨೧ ಲಕ್ಷ ಅಕ್ರಮ ಐಪಿ ಸೆಟ್:

ಜಿಲ್ಲೆಯಲ್ಲಿ ೧.೨೧ ಲಕ್ಷ ಅಕ್ರಮ ಐಪಿ ಸೆಟ್‌ಗಳಿದ್ದು, ಈ ಪೈಕಿ ೧.೧೫ ಲಕ್ಷ ಐಪಿ ಸೆಟ್‌ಗಳನ್ನು ಅಕ್ರಮ-ಸಕ್ರಮ ಯೋಜನೆಯಲ್ಲಿ ಸಕ್ರಮಗೊಳಿಸಿ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಉಳಿದಂತೆ ೫೫೭೧ ಅಕ್ರಮ ಐಸಿ ಸೆಟ್‌ಗಳಿದ್ದು, ಮೂರು ತಿಂಗಳೊಳಗೆ ಸಕ್ರಮಗೊಳಿಸಿ ಮೂಲ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಹೊಸದಾಗಿ ೨೬೦೦ ಅರ್ಜಿಗಳು ಬಂದಿವೆ. ಇದರಲ್ಲಿ ಮಂಡ್ಯ ಜಿಲ್ಲೆಯಿಂದಲೂ ೯೬ ಅಕ್ರಮ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆಗೆ ಅರ್ಜಿ ಸಲ್ಲಿಕೆಯಾಗಿವೆ. ೨ ಲಕ್ಷ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿದ ನಂತರ ಹೆಚ್ಚುವರಿಯಾಗಿ ಸಂಪುಟದಲ್ಲಿ ಒಪ್ಪಿಗೆ ಪಡೆದು ಕಾರ್ಯೋನ್ಮುಖರಾಗುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

೫೦೦ ಮೀಟರ್‌ವರೆಗೆ ಸರ್ಕಾರದ ವೆಚ್ಚದಲ್ಲಿ ಐಪಿ ಸೆಟ್ ಅಳವಡಿಕೆ:

ರೈತರು ತಮ್ಮ ಜಮೀನುಗಳಲ್ಲಿ ಕೊರೆಸಲಾಗಿರುವ ಬೋರ್‌ವೆಲ್‌ಗೆ ೫೦೦ ಮೀಟರ್ ದೂರದಲ್ಲಿ ವಿದ್ಯುತ್ ಕಂಬಗಳಿದ್ದಲ್ಲಿ ಅಂತಹವುಗಳನ್ನು ಇಲಾಖೆಯಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಒಂದು ವೇಳೆ ೫೦೦ ಮೀಟರ್‌ಗಿಂತ ಹೆಚ್ಚಿನ ದೂರ ಇದ್ದಲ್ಲಿ ಅಂತಹ ಬೋರ್‌ವೆಲ್‌ಗಳನ್ನು ಸೋಲಾರ್ ಪಂಪ್‌ಸೆಟ್ ಯೋಜನೆಗೆ ಒಳಪಡಿಸಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಶೇ.೮೦ರಷ್ಟು ಸರ್ಕಾರದ ವೆಚ್ಚ:

೫೦೦ ಮೀಟರ್‌ಗಿಂತ ಹೆಚ್ಚು ದೂರವಿರುವ ಬೋರ್‌ವೆಲ್‌ಗಳಿಗೆ ವಿದ್ಯುತ್ ಕಂಬಗಳಿಂದ ವಿದ್ಯುತ್ ಸಂಪರ್ಕ ಕೊಡುವುದರ ಬದಲು ಸೋಲಾರ್ ಅಳವಡಿಸಲು ಯೋಜನೆ ಜಾರಿಗೊಳಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ.೩೦ ಹಾಗೂ ರಾಜ್ಯ ಸರ್ಕಾರ ೫೦ ಸೇರಿ ಒಟ್ಟು ಶೇ. ೮೦ರಷ್ಟು ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ. ರೈತರು ಕೇವಲ ಶೇ.೨೦ರಷ್ಟು ಹಣ ನೀಡಿದರೆ ಸಾಕು. ಸೋಲಾರ್ ಸಿಸ್ಟಮ್ ಬಳಕೆ ಮಾಡಿಕೊಳ್ಳಬಹುದು ಎಂದರು.

ಪಂಪ್‌ ಸ್ಟೋರೇಜ್:

ಪಂಪ್ ಸ್ಟೋರೇಜ್ ವಿನೂತನ ಯೋಜನೆ. ಶರಾವತಿಯಲ್ಲಿ ಪ್ರಸ್ತುತ ೨ ಸಾವಿರ ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೊರಗೆ ಹರಿದ ನೀರನ್ನೇ ಪಂಪ್ ಮಾಡಿ ಮತ್ತೆ ವಿದ್ಯುತ್ ಉತ್ಪಾದನೆ ಮಾಡಲು ೯ ಸಾವಿರ ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಡಿಪಿಆರ್ ಕೂಡ ತಯಾರಾಗಿದೆ. ಪರಿಸರ ಇಲಾಖೆ ಅನುಮತಿ ಸಿಕ್ಕ ತಕ್ಷಣ ಟೆಂಡರ್ ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಇದರಿಂದ ೧ ಸಾವಿರ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಒಟ್ಟಾರೆ ಶರಾವತಿಯಿಂದ ೩ ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಲಾಗಿದೆ. ಇದೇ ರೀತಿಯಲ್ಲಿ ವಾರಾಹಿಯಲ್ಲೂ ಯೋಜನೆಗೆ ಸಿದ್ಧತೆ ನಡೆಸಿದ್ದೇವೆ ಎಂದು ವಿವರಿಸಿದರು.

ಬೇಸಿಗೆಯಲ್ಲಿ ಸಾವಿರ ಮೆ.ವ್ಯಾ. ವಿದ್ಯುತ್ ಪೂರೈಕೆ:

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್ ಪಾಂಡೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದೆ. ಎಲ್ಲ ಜಲಾಶಯಗಳಲ್ಲೂ ನೀರಿನ ಸಂಗ್ರಹವಿದೆ. ರೈತರು ೨ನೇ ಬೆಳೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾವು ಸ್ಯಾಟಲೈಟ್ ಮೂಲಕ ಮಾಹಿತಿ ಪಡೆದು ಎಲ್ಲೆಲ್ಲಿ ವಿದ್ಯುತ್ ಅಗತ್ಯವಿದೆಯೋ ಅಲ್ಲಿ ಹೆಚ್ಚುವರಿ ವಿದ್ಯುತ್ ನೀಡಲು ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.

ಕಳೆದ ವರ್ಷ ಹೆಚ್ಚು ಮಳೆಯಾಗದ ಕಾರಣ ಸಮಸ್ಯೆಗಳು ಉಂಟಾಗಿತ್ತು. ಈ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ೪೦೦ ಮೆ.ವ್ಯಾ. ಪೂರೈಕೆ ಮಾಡಲಾಗುವುದು. ಮಾರ್ಚ್ ಮತ್ತು ಏಪಿಲ್‌ನಲ್ಲಿ ೧ ಸಾವಿರ ಮೆ.ವ್ಯಾಟ್ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಕಳೆದ ವರ್ಷ ೧೭ ಸಾವಿರ ಮೆ.ವ್ಯಾಟ್ ಉತ್ಪಾದನೆಯಾಗುತ್ತಿತ್ತು. ಈ ಬಾರಿ ೧೮ ಸಾವಿರ ಮೆ.ವ್ಯಾಟ್ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವುದು ಕಷ್ಟವಾಗಿತ್ತು. ಆದರೆ, ಈ ಬಾರಿ ವಿದ್ಯುತ್ ಎಲ್ಲೆಡೆಯಿಂದ ದೊರೆಯುತ್ತಿದೆ. ೧ ಯೂನಿಟ್‌ಗೆ ೯ ರು.ನಂತೆ ಖರೀದಿಸಲಾಗುತ್ತಿದ್ದ ವಿದ್ಯುತ್ ಪ್ರಸ್ತುತ ೬ ರು. ದರದಲ್ಲಿ ಸಿಗುವ ಸಾಧ್ಯತೆಗಳಿವೆ. ನಾವು ರೈತರ ಹಿತದೃಷ್ಟಿಯಿಂದ ವಿದ್ಯುತ್ ಖರೀದಿ ಮಾಡಲು ಸಿದ್ಧರಿದ್ದೇವೆ. ಅದನ್ನು ಸಮರ್ಪಕವಾಗಿ ಪೂರೈಸುವ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಮಟ್ಟದ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಶಾಸಕರೂ ಆದ ಸೆಸ್ಕ್‌ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ದಿನೇಶ್ ಗೂಳಿಗೌಡ, ಕೆ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ವಿದ್ಯುತ್ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!