ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಿಗೆ ನೀಡುತ್ತಿರುವ ನೇರ ವೇತನ ವ್ಯವಸ್ಥೆಯನ್ನು ಕಿಮ್ಸ್‌ನಲ್ಲೂ ಅಳವಡಿಸಿಕೊಳ್ಳಿ. ಇದರಿಂದ ಕಿಮ್ಸ್‌ಗೆ ಪ್ರತಿವರ್ಷ ಕೋಟಿಗಟ್ಟಲೇ ಉಳಿತಾಯವಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಈ ವೇಳೆ ತಿಳಿಸಿದರು ಎನ್ನಲಾಗಿದೆ. ಇದಕ್ಕೆ ಸಚಿವರು ಬೆಂಗಳೂರಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳೋಣ ಎಂದರು.
ಹೊರಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ಸಂಬಳ ಪಾವತಿಸದ ಏಜೆನ್ಸಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಚಿವರು ಸೂಚಿಸಿದರು. ಕಿಮ್ಸ್‌ನಲ್ಲಿ ಏಜೆನ್ಸಿಯವರು ದೊಡ್ಡ ಮಟ್ಟದ ಲಾಭಿ ಹೊಂದಿದ್ದು, ಹೊರಗುತ್ತಿಗೆ ಸಿಬ್ಬಂದಿಗೆ ಹೆದರಿಸಿ, ಬೆದರಿಸಿ ಹಣ ಕೀಳುತ್ತಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಒಂದೊಂದು ತಿಂಗಳು ವೇತನ ಪಡೆದು ವಂಚಿಸುತ್ತಿದ್ದಾರೆ. ಆದಕಾರಣ ನೇರ ವೇತನ ಪಾವತಿಯಡಿ ನೇಮಿಸಿಕೊಳ್ಳುವುದು ಸೂಕ್ತ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕೆಂದೂ ಶಾಸಕ ಟೆಂಗಿನಕಾಯಿ ಮನವಿ ಮಾಡಿದರು ಎನ್ನಲಾಗಿದೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಲಾಡ್, ಈ ಬಗ್ಗೆ ಬೆಂಗಳೂರಲ್ಲಿ ಚರ್ಚಿಸಿ ನಿರ್ಧಾರ ಮಾಡೊಣ ಎಂದು ಹೇಳಿದರೆನ್ನಲಾಗಿದೆ.ಹೊರ ಹಾಗೂ ಒಳರೋಗಿಗಳ ವಿಭಾಗ, ವೈದ್ಯಕೀಯ, ಔಷಧ ಪೂರೈಕೆ, ಏಜೆನ್ಸಿಗಳ ಆಟಾಟೋಪ, ಹೊರಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ವೇತನ ಬಟವಡೆ ಮಾಡದಿರುವುದು, ಎಬಿಆರ್‌ಕೆ ಹಣ ಬಳಕೆ, ಬಳಕೆದಾರರ ಶುಲ್ಕ ವಿನಿಯೋಗ, ಸಿಎಸ್‌ಆರ್ ಚಟುವಟಿಕೆಗಳು, ಎಸ್ಟೇಟ್ ಅಧಿಕಾರಿ ಹಾಗೂ ಹಣಕಾಸು ಅಧಿಕಾರಿಯ ಕಾರ್ಯವೈಖರಿ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಕಿಮ್ಸ್ ಕ್ಯಾಂಪಸ್ ಮತ್ತು ಚಟುವಟಿಕೆಗಳ ಬಗ್ಗೆ ಸಚಿವರು ಕೇಳಿದ ಮಾಹಿತಿಗೆ ಸಮರ್ಪಕ ಮಾಹಿತಿ ನೀಡದ ಎಸ್ಟೇಟ್ ಅಧಿಕಾರಿ ಉದಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಮಾಹಿತಿ ತರಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಕಿಮ್ಸ್ ಬಗ್ಗೆ ಮಾಹಿತಿ ಇಲ್ಲದಿದ್ದರೆ ಎಸ್ಟೇಟ್ ಅಧಿಕಾರಿಯಾಗಿ ಏನು ಮಾಡುತ್ತೀರಿ ಎಂದು ಸಚಿವರು, ಶಾಸಕರು ಕೇಳಿದರು.
ರೋಗಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗಬಾರದು ಹಾಗೂ ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಮಹತ್ವ ನೀಡಬೇಕು ಎಂದು ಸಲಹೆ ಮಾಡಿದರು.
ಆರೋಗ್ಯ ವಿಮೆ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ವಿಮಾ ಸಂಸ್ಥೆಗಳಿಂದ ಸರಿಯಾದ ಸಮಯಕ್ಕೆ ವಿಮಾ ಮೊತ್ತ ದೊರೆಯದಿರುವ ಕುರಿತು ಚರ್ಚಿಸಿ, ಇದರ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚಿಸಿದರು.