ಕಾರವಾರ: ರಾಜ್ಯದಲ್ಲಿ ಕಳೆದ ಮಾರ್ಚ್– ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಗಣನೀಯ ಸಾಧನೆ ತೋರಿದ್ದು, ಇದಕ್ಕಾಗಿ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಭಿನಂದನೆಗಳನ್ನು ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡದ್ದು, ಈ ಬಾರಿಯ ಫಲಿತಾಂಶದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಪರೀಕ್ಷೆಗೆ ಹಾಜರಾದ 9,842 ವಿದ್ಯಾರ್ಥಿಗಳಲ್ಲಿ 8,517 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದ್ದು, ಪರೀಕ್ಷೆಗೆ ಹಾಜರಾದ 10,046 ವಿದ್ಯಾರ್ಥಿಗಳಲ್ಲಿ 8,503 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಶಿರಸಿಯ 3 ಮಂದಿ ವಿದ್ಯಾರ್ಥಿಗಳು 625ಕ್ಕೆ 624 ಪಡೆದು ರಾಜ್ಯಕ್ಕೆ ದ್ವಿತೀಯ ಮತ್ತು ಒಬ್ಬ ವಿದ್ಯಾರ್ಥಿ 623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿರುವುದು ಇಡೀ ಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ ಎಂದಿದ್ದಾರೆ.ಜಿಲ್ಲೆಯಲ್ಲಿ ಈ ಬಾರಿಯ ಫಲಿತಾಂಶ ವೃದ್ಧಿಗಾಗಿ ಶಿಕ್ಷಣ ಇಲಾಖೆ ವತಿಯಿಂದ ಹಲವು ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲ ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರೊಂದಿಗೆ ನಿರಂತರ ಸಭೆಗಳನ್ನು ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದ್ದರು. ಡಿಸೆಂಬರ್ ವೇಳೆಗೆ ಎಲ್ಲ ವಿಷಯವಾರು ಬೋಧನೆಯನ್ನು ಮುಕ್ತಾಯಗೊಳಿಸಿ, ಮಾರ್ಚ್ ವರೆಗೆ ಪುರ್ನಮನನ ಕಾರ್ಯಕ್ರಮ ನಡೆಸಲಾಯಿತು.