ನಗರಾದ್ಯಂತ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ 4 ಕಾರಿಡಾರ್ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರಾದ್ಯಂತ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ 4 ಕಾರಿಡಾರ್ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಬೆಂಗಳೂರು ಎಸ್ಎಂವಿಟಿ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ನೂತನ ದ್ವಿಸಾಪ್ತಾಹಿಕ ರೈಲಿಗೆ ಭಾನುವಾರ ವರ್ಚುವಲ್ ವಿಧಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್‌ಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದ್ದು, ನಿಲ್ದಾಣದ ಕೆಲಸ ನಡೆಯುತ್ತಿದೆ. ಕೆಎಸ್ಆರ್ ಬೆಂಗಳೂರು- ದೇವನಹಳ್ಳಿ ಕಾರಿಡಾರ್ ವಿನ್ಯಾಸವನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಅನುಮೋದಿಸಿ, ಭೂತಾಂತ್ರಿಕ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಕೆಂಗೇರಿ- ವೈಟ್‌ಫೀಲ್ಡ್ ಕಾರಿಡಾರ್ ಯೋಜನೆಯನ್ನು ಇತ್ತೀಚೆಗೆ ಅನುಮೋದಿಸಲಾಗಿದ್ದು, ಶೀಘ್ರ ಸರ್ವೇ ಕಾರ್ಯ ಆರಂಭವಾಗಲಿದೆ ಎಂದರು.
ಶೇ.97 ವಿದ್ಯುದೀಕರಣ ಪೂರ್ಣ:
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ 3840 ಕಿ.ಮೀ. ಉದ್ದದ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಶೇ.97ರಷ್ಟು (3747 ಕಿ.ಮೀ.) ಮುಗಿದಿದೆ. 707ರಷ್ಟು ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಕಾಮಗಾರಿಗಳು ಪೂರ್ಣಗೊಳ್ಳಲಿವೆ. 2,160 ಕೋಟಿ ರು. ವೆಚ್ಚದಲ್ಲಿ 62 ರೈಲು ನಿಲ್ದಾಣಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಲೆವೆಲ್ ಕ್ರಾಸಿಂಗ್‌ಗೆ ಗುಡ್‌ಬೈ:
ಮುಂದಿನ ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಇರಬಾರದೆಂಬ ಪ್ರಧಾನಿ ಮೋದಿ ಸೂಚನೆಯಂತೆ ಕಾರ್ಯೋನ್ಮುಖರಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ನೆರಡು ವರ್ಷಗಳಲ್ಲಿ ಯಾವುದೇ ಲೆವೆಲ್ ಕ್ರಾಸಿಂಗ್ ಇರಲ್ಲ. ಪ್ರಸ್ತುತ 47 ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದೆಡೆ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯಾ ಇದ್ದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.