ಬೆಂಗಳೂರು : ಉಪ ನಗರ ರೈಲ್ವೇ ಯೋಜನೆಗಾಗಿ (ಬಿಎಸ್‌ಆರ್‌ಪಿ) ಕಡಿಯಲಾಗುವ 32 ಸಾವಿರ ಮರಗಳಿಗೆ ಪರ್ಯಾಯವಾಗಿ ಒಂದಕ್ಕೆ ಹತ್ತರಂತೆ ಸಸಿಗಳನ್ನು ನೆಡಲು ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ತಿಳಿಸಿದೆ.
ಯೋಜನೆಗಾಗಿ ನಗರ, ಗ್ರಾಮೀಣ ಭಾಗದ 32,572 ಮರಗಳನ್ನು ತೆರವು ಮಾಡುವುದು ಅನಿವಾರ್ಯ. ಈ ಪೈಕಿ ಬಹುತೇಕ ನೀಲಗಿರಿ ಹಾಗೂ ಅಕೇಶಿಯಾ ಒಳಗೊಂಡ 17,505 ಮರಗಳು ದೇವನಹಳ್ಳಿಯ ಅಕ್ಕುಪೇಟೆಯಲ್ಲಿ ನಿರ್ಮಾಣ ಆಗಲಿರುವ ಉಪ ನಗರ ರೈಲ್ವೆ ಡಿಪೋ ಸ್ಥಳದಲ್ಲಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ.
ಉಳಿದಂತೆ 16067 ಮರಗಳು ಯೋಜನೆಯ ನಾಲ್ಕು ಕಾರಿಡಾರ್‌ನಲ್ಲಿ ಬರುತ್ತಿದ್ದು, 13996 ಮರಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, 1071 ಮರಗಳು ಇತರೆ ಪ್ರದೇಶಗಳಲ್ಲಿವೆ. ಈವರೆಗೆ ಬಿಬಿಎಂಪಿ 2098 ಮರಗಳ ತೆರವಿಗೆ ಹಾಗೂ 178 ಮರಗಳ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದೆ. ಇದಕ್ಕೆ ಪರ್ಯಾಯವಾಗಿ ಸಸಿ ನೆಡಲು ಕೆ- ರೈಡ್ ಬಿಬಿಎಂಪಿಗೆ ₹8,07,59,680 ಪಾವತಿಸಿದ್ದು, ಬಿಬಿಎಂಪಿ ಒಂದು ಮರಕ್ಕೆ ಹತ್ತು ಸಸಿಯಂತೆ ನಗರ ಪ್ರದೇಶದಲ್ಲಿ 22,760 ಸಸಿಗಳನ್ನು ನೆಡಲು ಮುಂದಾಗಿದೆ. ಇನ್ನು, ಪ್ರಸ್ತುತ 59 ಮರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಇದಕ್ಕೆ ತಕ್ಕಂತೆ ಒಂದಕ್ಕೆ ತಲಾ ಹತ್ತರಂತೆ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದೆ.
ಇನ್ನು, ಕೆ -ರೈಡ್, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಪ್ರಕಾರ ಎಲ್ಲಾ 58 ನಿಲ್ದಾಣಗಳಲ್ಲಿ ಹಸಿರು ನಿರ್ಮಾಣ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ನಿಲ್ದಾಣದಲ್ಲಿ ಸೌರಶಕ್ತಿ ಫಲಕ ಅಳವಡಿಸುತ್ತಿದೆ. ಅಲ್ಲದೆ, ನಿಲ್ದಾಣದಲ್ಲಿ ಮಳೆನೀರು ಕೊಯ್ಲು ಮತ್ತು ಇತರ ಸುಸ್ಥಿರ ತಂತ್ರಜ್ಞಾನಗಳನ್ನು ಅನುಷ್ಠಾನ ಮಾಡಲಿದೆ.
ಮುಂದಿನ ಕೆಲವು ವರ್ಷಗಳಲ್ಲಿ 9.84 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮತ್ತು ನಗರ ನಿವಾಸಿಗಳು ಉಪ ನಗರ ರೈಲು ಯೋಜನೆಯ ಪ್ರಯೋಜ ಪಡೆಯಲಿದ್ದಾರೆ ಎಂದು ಕೆ -ರೈಡ್ ತಿಳಿಸಿದೆ.
ವಿದೇಶಿ ಬ್ಯಾಂಕ್‌ಗಳಿಂದರೈಲ್ವೆ ಯೋಜನೆಗೆ ಸಾಲ
ಬಿಎಸ್‌ಆರ್‌ಪಿ ಅನುಷ್ಠಾನ ಪಡಿಸುತ್ತಿರುವ ಕೆ-ರೈಡ್ ಎರಡು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ ಸುಮಾರು ₹7,245 ಕೋಟಿ ಸಾಲ ಪಡೆಯುವಲ್ಲಿ ಯಶಸ್ವಿಯಾಗಿದೆ.
ಯೂರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್, ಬಿಎಸ್‌ಆರ್‌ಪಿಗೆ ₹2693 ಕೋಟಿ ಸಾಲ ನೀಡುವುದಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಜಮರ್ನಿಯ ಲಕ್ಸಂಬರ್ಗ್ ನಗರದ ಕೆಎಫ್‌ಡಬ್ಲ್ಯೂ ಡೆವಲೆಪ್‌ಮೆಂಟ್ ಬ್ಯಾಂಕ್, ಕೆ-ರೈಡ್ ಸಂಸ್ಥೆಗೆ ₹4,561 ಕೋಟಿ ಸಾಲ ನೀಡಿದೆ. ಯೋಜನೆಯ ಎಲ್ಲಾ ನಾಲ್ಕೂ ಕಾರಿಡಾರ್‌ಗಳ ಕಾಮಗಾರಿಗಳು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಇದು ಮಹತ್ವದ ಒಪ್ಪಂದವಾಗಿದ್ದು, ಶೇ.4ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಈ ಸಾಲವನ್ನು ಜರ್ಮನಿ ಬ್ಯಾಂಕ್ ನೀಡಿದೆ.
ಈ ಎರಡು ಬ್ಯಾಂಕ್‌ಗಳ ಹಣಕಾಸಿನ ಅನುಮೋದನೆ ಮೂಲಕ ಉಪನಗರ ರೈಲು ಯೋಜನೆಗೆ ಪೂರ್ಣ ಪ್ರಮಾಣದ ಸಾಲ ಸಿಕ್ಕಂತಾಗಿದೆ. ಈ ಮೂಲಕ ₹15,767 ಕೋಟಿ ಯೋಜನೆಗೆ ಹಣಕಾಸು ಲಭ್ಯವಾದಂತಾಗಿದ್ದು, ಇನ್ನುಳಿದ ಹಣಕಾಸು ನೆರವನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ತಲಾ ಶೇ. 20ರಷ್ಟು ಭರಿಸಲಿವೆ.