ಯಶಸ್ಸು ಸೋಮಾರಿ ಅಡಿಯಾಳಾಗದು

KannadaprabhaNewsNetwork | Published : Oct 11, 2024 11:46 PM

ಸಾರಾಂಶ

ಯುವಕರು ನಿಂತ ನೀರಾಗದೇ ಸದಾ ಪ್ರವಹಿಸುವ ನೀರಾಗಬೇಕು. ಯಶಸ್ಸು ಸಾಧಕನ ಸ್ವತ್ತಾಗುವುದೇ ವಿನಃ ಸೋಮಾರಿಯ ಅಡಿಯಾಳಾಗದು. ಸಾಧನೆಗೆ ಪರಿಶ್ರಮದ ಪ್ರೇರಣೆ ಅತ್ಯಗತ್ಯವಾಗಿದೆ ಎಂದು ಜಮಖಂಡಿ ಡಿವೈಎಸ್ಪಿ ಈ.ಶಾಂತವೀರ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಯುವಕರು ನಿಂತ ನೀರಾಗದೇ ಸದಾ ಪ್ರವಹಿಸುವ ನೀರಾಗಬೇಕು. ಯಶಸ್ಸು ಸಾಧಕನ ಸ್ವತ್ತಾಗುವುದೇ ವಿನಃ ಸೋಮಾರಿಯ ಅಡಿಯಾಳಾಗದು. ಸಾಧನೆಗೆ ಪರಿಶ್ರಮದ ಪ್ರೇರಣೆ ಅತ್ಯಗತ್ಯವಾಗಿದೆ ಎಂದು ಜಮಖಂಡಿ ಡಿವೈಎಸ್ಪಿ ಈ.ಶಾಂತವೀರ ಹೇಳಿದರು.

ತೇರದಾಳದ ಜೆ.ವಿ.ಮಂಡಳದ ಗುರುಕುಲ ಆವರಣದ ಜಿನಸೇನಾಚಾರ್ಯ ಸಭಾಭವನದಲ್ಲಿ ಗುರುವಾರ ನಡೆದ ಯುವಜನತೆಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಶಸ್ಸಿಗೆ ಆದರ್ಶ ವ್ಯಕ್ತಿಯ ಅಗತ್ಯವಿದೆ. ಆದರ್ಶ ವ್ಯಕ್ತಿ ನಿಮ್ಮ ಊರಿನ ಇಲ್ಲವೇ ನಿಮ್ಮ ತಂದೆ-ತಾಯಿಯೇ ಆಗಿದ್ದರೆ ನಿಮ್ಮ ಗುರಿ ನಿರಾಳವಾಗುತ್ತದೆ ಎಂದರು.ಸಾಧಕ ಅನುಭವಿಸಿದ ಕಷ್ಟ, ಸಮಗ್ರತೆಯ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ. ಇದರಿಂದ ನಿಮ್ಮ ಸಹನಶೀಲತೆ ವೃದ್ಧಿಯಾಗಿ ಗುರಿಯತ್ತ ನಿಮ್ಮ ಚಿತ್ತ ಅಚಲವಾಗುತ್ತದೆ. ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಬ್ರಿಟೀಷ್ ಕಾಲದ ಐಪಿಸಿ ಬದಲು ಭಾರತೀಯ ನ್ಯಾಯ ಸಂಹಿತೆಯ ಪರಿಣಾಮಗಳು, ಸೈಬರ್, ಪೋಕ್ಸೋ, ತಂತ್ರಜ್ಞಾನದ ಸದ್ಬಳಕೆ, ಪತ್ರಿಕೆಗಳ ಓದಿನ ಮಹತ್ವ, ಪ್ರಚಲಿತ ವಿದ್ಯಮಾನಗಳ ಅರಿವು, ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ಯಮಾನಗಳ ಜ್ಞಾನ ಇವುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಈ ವೇಳೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಿ.ಆರ್.ಪಾಟೀಲ, ಕಾರ್ಯದರ್ಶಿ ಡಾ.ಜೆ.ಬಿ.ಆಲಗೂರ, ತೇರದಾಳ ಠಾಣಾಧಿಕಾರಿ ಅಪ್ಪು ಐಗಳಿ, ಪ್ರಾಚಾರ್ಯ ಸಂತೋಷ ಕುಳ್ಳಿ, ನಿರ್ದೇಶಕ ಕಿರಣ ಕುಳ್ಳಿ ಉಪಸ್ಥಿತರಿದ್ದರು. ಪ್ರಿಯಾ, ಪವಿತ್ರಾ ಪರೀಟ ಪ್ರಾರ್ಥಿಸಿದರು. ಪ್ರಾಚಾರ್ಯ ಸಂತೋಷ ಕುಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಗುರವ, ಸ್ನೇಹಾ ತಾರದಾಳ ನಿರೂಪಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಂಗ ಸಂಸ್ಥೆಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ಸ್ವತಂತ್ರ ಪಿಯು ಕಲಾ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಯಶಸ್ಸಿಗೆ ಆದರ್ಶ ವ್ಯಕ್ತಿಯ ಅಗತ್ಯವಿದೆ. ಆದರ್ಶ ವ್ಯಕ್ತಿ ನಿಮ್ಮ ಊರಿನ ಇಲ್ಲವೇ ನಿಮ್ಮ ತಂದೆ-ತಾಯಿಯೇ ಆಗಿದ್ದರೆ ನಿಮ್ಮ ಗುರಿ ನಿರಾಳವಾಗುತ್ತದೆ

- ಈ.ಶಾಂತವೀರ,

ಡಿವೈಎಸ್ಪಿ.

Share this article