ತಂದೆ ತಾಯಿ, ದೇವರ ಸಂಪರ್ಕದಲ್ಲಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು: ಪರ್ತಗಾಳಿ ಶ್ರೀ

KannadaprabhaNewsNetwork | Published : Jan 16, 2025 12:46 AM

ಸಾರಾಂಶ

ಜೀವನದಲ್ಲಿ ತಂದೆ- ತಾಯಿ ಗಾಳಿಪಟದ ಸೂತ್ರವಿದ್ದಂತೆ. ಗಾಳಿಪಟದ ಸೂತ್ರ ಹರಿದರೆ ಹೇಗೆ ತನ್ನಿಂದ ತಾನೇ ಬಿದ್ದು ಹೋಗುವುದೋ ಅದೇ ರೀತಿ ನೀವು ಕೂಡಾ ತಂದೆ- ತಾಯಿಯ ಸಂಪರ್ಕ ಕಡಿದುಕೊಂಡರೆ ಅವನತಿ ಖಂಡಿತ ಎಂದು ಪರ್ತಗಾಳಿ ಶ್ರೀಗಳು ತಿಳಿಸಿದರು.

ಭಟ್ಕಳ: ಸದಾ ತಂದೆ- ತಾಯಿ, ದೇವರ ಸಂಪರ್ಕವನ್ನಿಟ್ಟುಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದು ಎಂದು ಗೋಕರ್ಣ ಪರ್ತಗಾಳಿ ಜೋವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.

ಅಳ್ವೇಕೋಡಿ ದುರ್ಗಾಪರಮೇಶ್ವರಿ ಮಾರಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ತಾಯಿಗೆ ಮಾತ್ರ ಮಗುವಿನ ಮನಸ್ಸು ಅರಿಯುವುಕ್ಕೆ ಸಾಧ್ಯ. ನಮಗೆ ಕಾಲ ಕಾಲಕ್ಕೆ ಅಗತ್ಯವಿರುವುದನ್ನು ತಾಯಿ ಮಾತ್ರ ಅರ್ಥಮಾಡಿಕೊಂಡು ನೀಡಬಲ್ಲಳು. ಪ್ರತಿಯೊಬ್ಬರೂ ಜೀವನದಲ್ಲಿ ನಮಗೆ ಪ್ರಾಪ್ತಿಯಾದದ್ದನ್ನು ಅನುಭವಿಸಿ ಸಂತಸದಿಂದ ಜೀವನ ಸಾಗಿಸುವುದನ್ನು ಕಲಿಯಬೇಕು.

ಜೀವನದಲ್ಲಿ ತಂದೆ- ತಾಯಿ ಗಾಳಿಪಟದ ಸೂತ್ರವಿದ್ದಂತೆ. ಗಾಳಿಪಟದ ಸೂತ್ರ ಹರಿದರೆ ಹೇಗೆ ತನ್ನಿಂದ ತಾನೇ ಬಿದ್ದು ಹೋಗುವುದೋ ಅದೇ ರೀತಿ ನೀವು ಕೂಡಾ ತಂದೆ- ತಾಯಿಯ ಸಂಪರ್ಕ ಕಡಿದುಕೊಂಡರೆ ಅವನತಿ ಖಂಡಿತ ಎಂದ ಅವರು, ಕಳೆದ ಹನ್ನೆರಡು ವರ್ಷಗಳಿಂದ ನಡೆಯುತ್ತಿರುವ ಮಾರಿ ಜಾತ್ರಾ ಮಹೋತ್ಸವ ಪ್ರತಿ ವರ್ಷವೂ ಶ್ರೀಗಳ ಉಪಸ್ಥಿತಿಯಲ್ಲಿಯೇ ನಡೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾಪರಮೇಶ್ವರಿ ಮಾರಿ ಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಅಳ್ವೇಕೋಡಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿ ಜಾತ್ರಾ ಮಹೋತ್ಸವ ಶ್ರೀಗಳ ಉಪಸ್ಥಿತಿಯಲ್ಲಿಯೇ ನಡೆಯುತ್ತಾ ಬಂದಿದೆ. ಅಳ್ವೇಕೋಡಿಯಲ್ಲಿ ಶ್ರೀಗಳಿಗೆ ಭಕ್ತರಿಂದ ದೊರೆಯುವ ಪ್ರೀತಿ, ಭಕ್ತಿ ಅನನ್ಯವಾದುದು ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸನಾತನ ಹಿಂದೂ ಧರ್ಮ ಇಂದು ಉಳಿದುಕೊಂಡಿದ್ದರೆ ಅದಕ್ಕೆ ಮಠ ಮಂದಿಗಳ, ಸಾಧು ಸಂತರ ಕೊಡುಗೆ ಅಪಾರವಾದದ್ದಾಗಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಅಕ್ರಮಣವಾಗುತ್ತಾ ಬಂದರೂ ಸನಾತನ ಹಿಂದೂ ಧರ್ಮ- ಸಂಸ್ಕೃತಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಮಠ- ಮಂದಿರಗಳು, ಸಾಧು ಸಂತರಿಗೆ ನಾವು ತಲೆಬಾಗಬೇಕಾಗುತ್ತದೆ ಎಂದರು.

ಮಾಜಿ ಸಾಸಕ ಸುನಿಲ್ ನಾಯ್ಕ, ಅತಿಥಿಗಳಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯನ ದೈಮನೆ, ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಹಳೇಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ, ಮಾರಿ ಜಾತ್ರಾ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಬಿಳಿಯಾ ಕೆ. ನಾಯ್ಕ, ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಗಜಾನನ ಆಚಾರ್ಯ, ಅರ್ಚಕ ವೇ.ಮೂ. ನರಸಿಂಹ ಪುರಾಣಿಕ, ಮೊಗೇರ ಸಮಾಜದ ಪ್ರಮುಖ ಎಫ್.ಕೆ. ಮೊಗೇರ ಮುಂತಾದವರು ಉಪಸ್ಥಿತರಿದ್ದರು.

ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರೂಪಿಸಿದರು. ನಂತರ ರಾತ್ರಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಯಕ್ಷಗಾನ ಬಯಲಾಟ ಸಂಪೂರ್ಣ ದೇವಿ ಮಹಾತ್ಮೆ ನೆರೆದ ಸಾವಿರಾರು ಜನರನ್ನು ರಂಜಿಸಿತು.

Share this article