ತಪ್ಪುಗಳನ್ನು ಅರಿತು ತಿದ್ದಿಕೊಂಡರೆ ಯಶಸ್ಸು ಸಾಧ್ಯ: ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್

KannadaprabhaNewsNetwork | Published : Apr 24, 2025 11:47 PM

ಸಾರಾಂಶ

ವಿದ್ಯಾರ್ಥಿಯಾಗಿದ್ದಾಗಲೇ ಪೋಷಕರ ಜೊತೆ ಜಗಳವಾಡುವುದು ಸಾಮಾನ್ಯವಾಗಿರುತ್ತದೆ. ತಂದೆ- ತಾಯಿಗಳ ಜೊತೆ ಸ್ನೇಹಿತರಾಗಿ ವರ್ತಿಸಬೇಕು. ಪೋಷಕರ ಹಾಗೂ ಗುರುಗಳ ಸಹಾಯವಿಲ್ಲದೆ ಜೀವನದಲ್ಲಿ ಏನನ್ನೂ ಮಾಡಲು ಆಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಯಾಗಿದ್ದಾಗಲೇ ಮಾಡಿದ ತಪ್ಪುಗಳನ್ನು ಅರಿತು ತಿದ್ದುಕೊಳ್ಳಬೇಕು. ಗುರಿಯನ್ನು ಸಾಧಿಸುವ ಕ್ಷಮತೆ ಬೆಳೆಸಿಕೊಳ್ಳಬೇಕು. ಮಾಡಿದ ತಪ್ಪುಗಳನ್ನು ತಿದ್ದುಕೊಂಡಾಗಲೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ತಿಳಿಸಿದರು.ನಗರದ ಯುವರಾಜ ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ 2024- 25ನೇ ಸಾಲಿನ ಜ್ಞಾನವಾಹಿನಿಯ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಎಸ್ ಸಿಸಿ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.ಜೀವನದಲ್ಲಿ ಗುರಿ ಇರಿಸಿಕೊಂಡು ಬದುಕಬೇಕು. ಗುರಿಯ ಮಾರ್ಗದಲ್ಲೇ ಸಾಗಬೇಕು. ಗುರಿಯ ಅಂತಿಮ ಘಟ್ಟವೇ ಸುಖ ಹಾಗೂ ಸಂತೋಷವಾಗಿರುತ್ತದೆ. ಹೀಗಾಗಿ, ವಿದ್ಯಾರ್ಥಿಯಾಗಿದ್ದಾಗಲೇ ಗುರಿಯತ್ತ ನಿಮ್ಮ ಗಮನವಿರಬೇಕು. ಗುರಿಯನ್ನು ಮುಟ್ಟುವವರೆಗೂ ಬೇರೆ ಕಡೆ ಗಮನಹರಿಸದಂತೆ ಅವರು ಕಿವಿಮಾತು ಹೇಳಿದರು.ವಿದ್ಯಾರ್ಥಿಯಾಗಿದ್ದಾಗಲೇ ಪೋಷಕರ ಜೊತೆ ಜಗಳವಾಡುವುದು ಸಾಮಾನ್ಯವಾಗಿರುತ್ತದೆ. ತಂದೆ- ತಾಯಿಗಳ ಜೊತೆ ಸ್ನೇಹಿತರಾಗಿ ವರ್ತಿಸಬೇಕು. ಪೋಷಕರ ಹಾಗೂ ಗುರುಗಳ ಸಹಾಯವಿಲ್ಲದೆ ಜೀವನದಲ್ಲಿ ಏನನ್ನೂ ಮಾಡಲು ಆಗುವುದಿಲ್ಲ. ವಿದ್ಯಾರ್ಥಿಗಳು ಪೋಷಕರನ್ನು ಹಾಗೂ ಗುರುಗಳನ್ನು ಗೌರವಿಸಬೇಕು ಎಂದರು.ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಉದ್ಘಾಟಿಸಿದರು. ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಾಹಿನಿ ಸಮಿತಿಯ ಸಂಚಾಲಕ ಜಿ. ಕೃಷ್ಣಮೂರ್ತಿ, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ. ವೆಂಕಟೇಶ, ಪರೀಕ್ಷಾ ನಿಯಂತ್ರಣಾಧಿಕಾರಿ ಸಿ. ನಾಗೇಶ್ ಬಾಬು, ಆಡಳಿತಾಧಿಕಾರಿ ಪ್ರೊ.ಕೆ. ಅಜಯ್ ಕುಮಾರ್ ಇದ್ದರು. ‘ಸಿನಿಮಾ ನಟ, ನಟಿಯರನ್ನು ಮಾದರಿಯಾಗಿ ತೆಗೆದುಕೊಳ್ಳಬಾರದು. ಸಿನಿಮಾಕ್ಕಾಗಿ ನಿಮ್ಮನ್ನು ಬಳಸಿಕೊಳ್ಳಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಹಿಂಬಾಲಿಸಿ ಇಂತಹ ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳಬೇಡಿ. ನಾಳೆ ನಿಮ್ಮ ಜೀವನದಲ್ಲಿ ಕಷ್ಟ ಬಂದಾಗ ಯಾವ ನಟ, ನಟಿಯರೂ, ಸ್ನೇಹಿತರು ಬರುವುದಿಲ್ಲ. ನಿಮ್ಮೊಂದಿಗೆ ಸದಾ ಇರುವವರು ಹೆತ್ತವರು.’- ರಘು ದೀಕ್ಷಿತ್, ಸಂಗೀತ ನಿರ್ದೇಶಕ

Share this article