ಕನ್ನಡಪ್ರಭ ವಾರ್ತೆ ರಾಯಚೂರುಆತ್ಮ ಭರವಸೆಯಿಂದ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಬಿಬಿಸಿಯಿಂದ ವಿಶ್ವದ ಅತಿ ಕಿರಿಯ ವಯಸ್ಸಿನ ಮುಖ್ಯಶಿಕ್ಷಕ ಎಂಬ ಖ್ಯಾತಿ ಹೊಂದಿದ ಬಾಬರ್ ಅಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಅತ್ಯಂತ ಹಿಂದುಳಿದಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಶಾಲೆ ಬಿಟ್ಟ ಮಕ್ಕಳಿಂದ ಕಲಿಕೆ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಯೋಚಿಸಿ ಯಾವುದೇ ಶುಲ್ಕವಿಲ್ಲದೇ ಶಾಲೆ ಪ್ರಾರಂಭಿಸಲಾಯಿತು. ಅದು ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸಲು ಪ್ರೇರೇಪಿಸಿತು. ಬಡತನದಿಂದ ಅತಿ ಹೆಚ್ಚು ಮಕ್ಕಳು ಶಾಲೆಗೆ ಹೋಗದೇ ಹಿಂದುಳಿಯುತ್ತಾರೆ. ಕಲಿಕೆ ಆಸಕ್ತಿ ಇರುವ ಅದೇಷ್ಟೊ ಮಕ್ಕಳ ಶಾಲೆಗೆ ಬಾರದಿರಲು ಕೌಟುಂಬಿಕ ಹಾಗೂ ಸಮಾಜದ ಕಾರಣಗಳಿರುತ್ತವೆ. ಸಮಸ್ಯೆ ಗಳೇ ಶಾಲೆಯಿಂದ ದೂರ ಉಳಿಯಲು ಕಾರಣಗಬಾರದು ಎಂಬ ಉದ್ದೇಶದಿಂದ ಶಾಲೆಗೆ ಬರುವುದನ್ನು ರೂಢಿಸಲಾಯಿತು ಎಂದು ತಿಳಿಸಿದರು.ಸರ್ಕಾರಿ ಮತ್ತು ಖಾಸಗಿ ಶಾಲೆಗಳೇ ಇಲ್ಲದೇ ಇರುವುದರಿಂದ ಮಕ್ಕಳು ಶಿಕ್ಷಣದಿಂದ ಪೂರ್ಣವಾಗಿ ವಂಚಿತರಾಗುವಂತಾಗಿತ್ತು. ಒಂದು ಸಾರಿ ಮಕ್ಕಳು ಶಾಲೆಗೆ ಬರಲು ಶುರುವಾದ ನಂತರ ಶಿಕ್ಷಣ ಮಟ್ಟ ಹೆಚ್ಚಿಸಲು ಕಾರಣವಾಯಿತು. ಸರಿಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನಂದ ಶಿಕ್ಷಾನಿಕೇತನ ಶಾಲೆಯಲ್ಲಿ ಅಭ್ಯಾಸ ಮಾಡುವಂತಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ಉದ್ಘಾಟಿಸಿದರು. ಡಿಡಿಪಿಐ ಕೆ.ಡಿ.ಬಡಿಗೇರ್, ಡಯಟ್ ಪ್ರಾಚಾರ್ಯೆ ಆರ್.ಇಂದಿರಾ ಮಾತನಾಡಿದರು. ಈ ಸಂದರ್ಭದಲ್ಲಿ ಡಿಡಿಪಿಯು ರಾಜಶೇಖರ ಹೊಕ್ರಾಣಿ, ಬಿಇಒ ಚಂದ್ರಶೇಖರ ಬಂಡಾರಿ, ಎನ್.ಬಿ.ರಂಗಸ್ವಾಮಿ, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಸೈಯದ್ ಹಫಿಜುಲ್ಲಾ, ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಮು.ಗು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.ಚಿತ್ರಪಟಗಳ ಬ್ಯಾನರ್ ಬಿಡುಗಡೆರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ವಿಶ್ವದ ಅತಿ ಕಿರಿಯ ವಯಸ್ಸಿನ ಮುಖ್ಯ ಶಿಕ್ಷಕ ಎಂಬ ಖ್ಯಾತಿ ಹೊಂದಿದ ಬಾಬರ್ ಅಲಿ ಅವರೊಂದಿಗೆ ಶಿಕ್ಷಕರ ಸಂವಾದ ಕಾರ್ಯಕ್ರಮವನ್ನು ಚಿತ್ರಪಟಗಳ ಬ್ಯಾನರ್ ಬಿಡುಗಡೆಗೊಳಿಸಿ, ವಿನೂತನ ವಾಗಿ ಉದ್ಘಾಟಿಸಲಾಯಿತು. ಭಾರತ ಜ್ಞಾನ ವಿಜ್ಞಾನ ಸಮಿತಿ ವಾಸವಿ ಸೇವಾ ಸಮಿತಿ ಹಾಗೂ ರೋಟರಿ ಕ್ಲಬ್ ಸಂಯುಕ್ತ ರೂಪಿಸಿದ ವಿಜ್ಞಾನದ ಚಿತ್ರ ಪಟಗಳ ಬ್ಯಾನರ್ ಅನ್ನು ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ಬಿಡುಗಡೆಗೊಳಿಸಿದರು.