ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭೂಮಿ ಸ್ಟಡಿ ಸರ್ಕಲ್‌ನ ನಿರ್ದೇಶಕ
ಕನ್ನಡಪ್ರಭ ವಾರ್ತೆ ಕೊಪ್ಪಳಸತತ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ವಿ ಸಾಧ್ಯ ಎಂದು ಕೊಪ್ಪಳದ ಭೂಮಿ ಸ್ಟಡಿ ಸರ್ಕಲ್‌ನ ನಿರ್ದೇಶಕ ಮಹೇಶ ಪಟ್ಟೇದ ಹೇಳಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಐಕ್ಯೂಎಸಿ ಹಾಗೂ ಉದ್ಯೋಗ ಕೋಶ ಘಟಕಗಳ ಮತ್ತು ಕೊಪ್ಪಳದ ಭೂಮಿ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳನ್ನು ವಿದ್ಯಾರ್ಥಿಗಳು ಕೇಳಿ ಅವುಗಳನ್ನು ಉಪಯೋಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು. ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಚಿತ ಅನ್‌ಲೈನ್ ತರಗತಿಗಳು ನಡೆಯುತ್ತಿರುತ್ತವೆ. ಅವುಗಳನ್ನು ನೀವು ಕೇಳಿ ಜ್ಞಾನ ಹೆಚ್ಚಿಸಿಕೊಳ್ಳಿ. ಪ್ರತಿದಿನ ಪತ್ರಿಕೆ ಓದಿ. ಗ್ರಂಥಾಲಯದಲ್ಲಿ ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪುಸ್ತಕ ಓದಿ. ಸಮಯ ವ್ಯರ್ಥ ಮಾಡಬೇಡಿ. ನಿಮ್ಮಲ್ಲಿ ಛಲವಿರಬೇಕು. ಆಗ ಮಾತ್ರಗುರಿ ಮುಟ್ಟುವುದಕ್ಕೆ ಸಾಧ್ಯ ಎಂದರು.
ಕಾಲೇಜಿನ ಉದ್ಯೋಗ ಕೋಶ ಘಟಕದ ಸಂಚಾಲಕ ವಿಠೋಬ ಮಾತನಾಡಿ, ಇಂದು ಸ್ಪರ್ಧೆ ಹೆಚ್ಚು ಇದೆ. ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವುದರಿಂದ ಉದ್ಯೋಗಗಳು ಸಿಗುವುದಿಲ್ಲ. ಇಂದು ಜನ ಮತ್ತು ಸಂಸ್ಥೆಗಳು ಸಮಸ್ಯೆಗಳಿಗೆ ಬಹುಬೇಗನೆ ಪರಿಹಾರ ಬಯಸುತ್ತಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ನೀವು ವಿಧ್ಯಾಬ್ಯಾಸ ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಮಾತನಾಡಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಅಶೋಕ ಕುಮಾರ, ದೈಹಿಕ ಶಿಕ್ಷಣ ಭೋಧಕ ಡಾ. ಪ್ರದೀಪ್‌ಕುಮಾರ ಮತ್ತು ಪತ್ರಿಕೋದ್ಯಮ ವಿಭಾಗದ ಡಾ. ನರಸಿಂಹ ಹಾಗೂ ಅತಿಥಿ ಉಪನ್ಯಾಸಕರು ಇದ್ದರು. ರೇವತಿ ಪ್ರಾರ್ಥಿಸಿದರು. ವಿಠೋಬ ಸ್ವಾಗತಿಸಿ ನಿರೂಪಿಸಿದರು. ನಿಂಗಜ್ಜ ಸೊಂಪುರ ವಂದಿಸಿದರು.