ಹೊಸಪೇಟೆ: ಯುವ ಜನತೆಯಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಯುವಜನೋತ್ಸವದ ಮುಖ್ಯ ಉದ್ದೇಶವಾಗಿದೆ. ಜಿಲ್ಲಾ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಸಾಧನೆ ಮಾಡಲು ಯುವ ಪ್ರತಿಭೆಗಳು ನಿರಂತರ ಪರಿಶ್ರಮ, ಶ್ರದ್ಧೆಯ ಅಭ್ಯಾಸ ಹಾಗೂ ಗೆಲ್ಲುವ ಛಲ ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಓದು, ಬರಹ ಹಾಗೂ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿವೆ. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಸಂವಹನ ಕೌಶಲ್ಯ, ನಾಯಕತ್ವ ಗುಣ ಬೆಳೆಸುತ್ತವೆ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದ ಸಮಗ್ರ ವಿಕಸನ ಸಾಧ್ಯವಾಗುತ್ತದೆ. ಕಾರ್ಯಕ್ರಮಗಳಲ್ಲಿ ಕೇವಲ ಭಾಗವಹಿಸುವುದಷ್ಟೇ ಅಲ್ಲದೆ ಇತರರ ಪ್ರದರ್ಶನ ಪ್ರೋತ್ಸಾಹಿಸುವ ಮನೋಭಾವ, ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಯುವಜನೋತ್ಸವವು ಯುವ ಪ್ರತಿಭೆಗಳಿಗೆ ತಮ್ಮ ಕಲಾ ಸಾಮರ್ಥ್ಯ ಪ್ರದರ್ಶಿಸಲು ಹಾಗೂ ಜಿಲ್ಲಾ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಲು ಅವಕಾಶ ಕಲ್ಪಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ತಳವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಗೊಂಡಬಾಳ ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ವಾರ್ತಾಧಿಕಾರಿ ಡಾ.ಎಸ್.ಎಂ. ಹಿರೇಮಠ, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿವಿಧ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.ಯುವಜನೋತ್ಸವ ಫಲಿತಾಂಶ: ಜಿಲ್ಲಾ ಮಟ್ಟದ ಯುವಜನೋತ್ಸವದ ಸ್ಪರ್ಧೆ ಜಾನಪದ ನೃತ್ಯ: ಪ್ರಥಮ ಸ್ಥಾನ ಶ್ವೇತಾ ಮತ್ತು ತಂಡ ಹಾಗೂ ದ್ವಿತೀಯ ಸ್ಥಾನ ನೇತ್ರಾ ತಂಡ ಪಡೆದುಕೊಂಡಿದೆ.
ನುಕ್ಕಡ್ ನಾಟಕ: ಪ್ರಥಮ ಸ್ಥಾನ ರಂಗಸಖಿ ಕಲಾ ತಂಡ ಮತ್ತು ದ್ವಿತೀಯ ಸ್ಥಾನ ಜಗದೀಶ್ ಮತ್ತು ತಂಡ ಸ್ಥಾನ ಪಡೆದಿದೆ.
ಚಿತ್ರಕಲೆ: ಪ್ರಥಮ ಸ್ಥಾನ ವೀರೇಶ ಮತ್ತು ದ್ವಿತೀಯ ಸ್ಥಾನ ಪೃಥ್ವಿರಾಜ್ ಪಡೆದಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ತಳವಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.