ಧರಣಿ ಯಶಸ್ವಿ: ಹಿಂದೆ ಸಂಚರಿಸಿದ ಬಸ್ಸಲ್ಲೇ ಊರಿಗೆ ಮರಳಿದ ಗ್ರಾಮಸ್ಥರು!

KannadaprabhaNewsNetwork | Published : Jun 29, 2024 12:33 AM

ಸಾರಾಂಶ

ಹಲವು ವರ್ಷಗಳಿಂದ ನಿಂತು ಹೋಗಿದ್ದ ಕೆಎಸ್‌ಆರ್‌ಟಿಸಿ ಸಂಚಾರ ಮರು ಆರಂಭಿಸುವಂತೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕೊನೆಗೂ ತಮ್ಮೂರಿಗೆ ಬಸ್‌ನೊಂದಿಗೆ ಮರಳಿದ ಅಪರೂಪದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಸಹಾಯಕ ಸಂಚಾರಿ ಮೇಲ್ವಿಚಾರಕರು ತಕ್ಷಣವೇ ಜಾರಿಗೆ ಬರುವಂತೆ ಬಸ್ ಸಂಚಾರ ಪುನರಾರಾಂಭಿಸಿದರಲ್ಲದೆ, ಅದೇ ಬಸ್‌ನಲ್ಲಿ ಪ್ರತಿಭಟನಾಕಾರರನ್ನು ಅವರ ಊರಿಗೆ ಕಳುಹಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಲವು ವರ್ಷಗಳಿಂದ ನಿಂತು ಹೋಗಿದ್ದ ಕೆಎಸ್‌ಆರ್‌ಟಿಸಿ ಸಂಚಾರ ಮರು ಆರಂಭಿಸುವಂತೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕೊನೆಗೂ ತಮ್ಮೂರಿಗೆ ಬಸ್‌ನೊಂದಿಗೆ ಮರಳಿದ ಅಪರೂಪದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಸಹಾಯಕ ಸಂಚಾರಿ ಮೇಲ್ವಿಚಾರಕರು ತಕ್ಷಣವೇ ಜಾರಿಗೆ ಬರುವಂತೆ ಬಸ್ ಸಂಚಾರ ಪುನರಾರಾಂಭಿಸಿದರಲ್ಲದೆ, ಅದೇ ಬಸ್‌ನಲ್ಲಿ ಪ್ರತಿಭಟನಾಕಾರರನ್ನು ಅವರ ಊರಿಗೆ ಕಳುಹಿಸಿದರು. ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮಕ್ಕೆ ೨೦೧೮ರಲ್ಲಿ ಒಟ್ಟು ೩ ಬಸ್ ಮಾರ್ಗಗಳಿದ್ದು, ಈಗಾಗಲೇ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದಿಂದ ೨ ಬಸ್‌ಗಳ ಸೇವೆ ಒದಗಿಸಲಾಗುತ್ತಿದ್ದು, ಈ ಪೈಕಿ ಬೆಳಗ್ಗೆ ೧೧.೩೦ ಸಮಯದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡಿದ್ದ ಬಸ್ ಸೇವೆಯನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಮಂಕ್ಯ, ಕಿಕ್ಕರಳ್ಳಿ, ತಾಕೇರಿ ಗ್ರಾಮಗಳ ಬೆರಳಣಿಕೆಯ ಗ್ರಾಮಸ್ಥರು ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ಮುಂದೆ ಧರಣಿ ಕುಳಿತರು.

ಮಾತ್ರವಲ್ಲದೇ, ಯಾವುದೇ ಬಸ್‌ಗಳು ಘಟಕದಿಂದ ಒಳಗೂ, ಹೊರಗು ಹೋಗದಂತೆ ಮನೆಯಿಂದ ತಂದಿದ್ದ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಸುರಿಯುವ ಮಳೆಯಲ್ಲೇ ಧರಣಿ ಪ್ರತಿಭಟನೆ ನಡೆಸಿದರು. ಸ್ಥಗಿತ ಮಾಡಿರುವ ಬಸ್ ಮಾರ್ಗವನ್ನು ತಕ್ಷಣವೇ ಆರಂಭಿಸಬೇಕು, ಇಲ್ಲದಿದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ಘಟಕದ ಸಹಾಯಕ ನಿಯಂತ್ರಣ ಮೇಲ್ವಿಚಾರಣೆ ಅಧಿಕಾರಿ ಈರಸಪ್ಪ, ಪ್ರತಿಭಟನಾನಿರತ ಗ್ರಾಮಸ್ಥರ ಮನವಿ ಆಲಿಸಿದರು. ಈಗಾಗಲೇ ೨ ಬಸ್ ಸೇವೆಯನ್ನು ಗ್ರಾಮಕ್ಕೆ ನೀಡಲಾಗುತ್ತಿದೆ. ಮಡಿಕೇರಿ ಘಟಕದಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ ಸಿಬ್ಬಂದಿ ಕೊರತೆ ಇದೆ. ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆ ಬಳಿಕ ನಿಮ್ಮ ಬೇಡಿಕೆಯಂತೆ ೩ನೇ ಬಸ್ ಸೇವೆ ಒದಗಿಸಲಾಗುತ್ತದೆ ಎಂದು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು.

ಆದರೆ ಇದಕ್ಕೆ ಗ್ರಾಮಸ್ಥರು ಯಾವುದೇ ಸೊಪ್ಪು ಹಾಕದೇ ಧರಣಿ ಮುಂದುವರೆಸಿದರು. ಗ್ರಾಮಸ್ಥರ ಬೇಡಿಕೆಗೆ ಕೊನೆಗೂ ಮಣಿದ ಅಧಿಕಾರಿಗಳು ಬೇರೊಂದು ಬಸ್‌ನ್ನು ಗ್ರಾಮಸ್ಥರ ಬೇಡಿಕೆಯಂತೆ ‘ಮಡಿಕೇರಿ-ಸೂರ್ಲಬ್ಬಿ-ಕಿಕ್ಕರಳ್ಳಿ’ ಮಾರ್ಗಕ್ಕೆ ನೀಡುವ ಮೂಲಕ ಧರಣಿ ಪ್ರತಿಭಟನೆಗೆ ಅಂತ್ಯ ಕಾಣಿಸಿದರು.

ತಮ್ಮ ಬೇಡಿಕೆ ಈಡೇರಿಸಿಕೊಂಡ ಸಂತೃಪ್ತಿಯಲ್ಲಿ ಮನೆಯಿಂದ ತಂದಿದ್ದ ಪ್ಲಾಸ್ಟಿಕ್ ಟಾರ್ಪಲ್‌ನೊಂದಿಗೆ ಬೆರಳೆಣಿಕೆ ಮಂದಿ ಪ್ರತಿಭಟನಾಕಾರರು ಅದೇ ಬಸ್‌ನಲ್ಲಿ ತಮ್ಮೂರಿಗೆ ಮರಳಿದರು.

ಈ ಸಂದರ್ಭ ತಾಕೇರಿ ಪೊನ್ನಪ್ಪ, ಮುದ್ದಂಡ ತಿಮ್ಮಯ್ಯ, ನಾಪಂಡ ಲೋಹಿತ್, ನಾಪಂಡ ರಘು, ಚಾಮೇರ ಸಂತೋಷ್ ಚಂಗಪ್ಪ ಮತ್ತಿತರರು ಹಾಜರಿದ್ದರು.

Share this article