ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಎಚ್.ಮಲ್ಲೀಗೆರೆ ಗ್ರಾಮದ ಶಂಕರ್ ಅವರ ಪತ್ನಿ ಕವಿತಾ (೨೬) ಎಂಬಾಕೆಯೇ ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿಗೆ ತಲುಪಿ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.
ತಾಲೂಕಿನ ಎಚ್. ಮಲ್ಲೀಗೆರೆ ಗ್ರಾಮದ ಕವಿತಾ ಅವರು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದರು. ೬ ತಿಂಗಳ ಗರ್ಭಿಣಿಯಾಗಿದ್ದ ವೇಳೆ ಇದ್ದಕ್ಕಿದಂತೆ ಕವಿತಾ ಅವರು ತೊದಲು ನುಡಿಯನ್ನಾಡಲು ಪ್ರಾರಂಭಿಸಿದ್ದರು. ಫೆ.೧೭ರಂದು ಮುಂಜಾನೆ ೫ ಗಂಟೆ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಆಕೆಯನ್ನು ಮಿಮ್ಸ್‌ಗೆ ಕರೆತಂದು ತಪಾಸಣೆ ನಡೆಸಿದ ವೇಳೆ ಅವರಿಗೆ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಮಿಮ್ಸ್‌ನ ವೈದ್ಯರು ಬೆಂಗಳೂರಿನ ಉನ್ನತ ಕೇಂದ್ರಕ್ಕೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.ಪೋಷಕರು ಆಕೆಯನ್ನು ನಿಮ್ಹಾನ್ಸ್‌ಗೆ ಕರೆದೊಯ್ದರು. ರೋಗಿಯ ಸ್ಥಿತಿಯನ್ನು ಕಂಡ ನಿಮ್ಹಾನ್ಸ್‌ನವರು ಅಲ್ಲಿ ರೋಗಿಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗಲೂ ಅಲ್ಲೂ ಕೈಚೆಲ್ಲಿದರು. ಬಳಿಕ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದು ಫೆ.೧೭ರಂದು ಆಕೆಗೆ ಬ್ರೈನ್ ಟ್ಯೂಮರ್ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಮೂರ್ನಾಲ್ಕು ದಿನಗಳಿಗೆ ೩ ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಲಾಗಿತ್ತು. ನಂತರ ಆಕೆಯ ಪೋಷಕರು ಮಂಡ್ಯದ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡರು.
ಈ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆದರೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮತ್ತೆ ಆಕೆಗೆ ಚಿಕಿತ್ಸೆ ಮುಂದುವರಿಸಲಾಯಿತು. ಯಶಸ್ವಿಯಾಗಿ ೩೬ ವಾರಗಳ ಕಾಲ ಚಿಕಿತ್ಸೆ ನೀಡಿದ ನಂತರ ಸ್ತ್ರೀ ರೋಗ ತಜ್ಞ ಡಾ.ಮನೋಹರ್ ಮತ್ತು ತಂಡ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ತಾಯಿಗೆ ಅಗತ್ಯ ಪೌಷ್ಟಿಕಾಂಶದ ಕೊರತೆ ಇದ್ದ ಕಾರಣ ಮಗು ಕೇವಲ ೧ ಕೆಜಿ ೬೦೦ ಗ್ರಾಂ ತೂಕ ಇತ್ತು.
ಲಕ್ಷಾಂತರ ರು. ಖರ್ಚು ಮಾಡಿ ಉನ್ನತ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೂ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದು ಕಷ್ಟ. ಇಂತಹ ಸಮಯದಲ್ಲಿ ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಶುಶ್ರೂಷಕರ ತಂಡ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವಲ್ಲಿ ವಿಶೇಷ ಕಾಳಜಿ ವಹಿಸಿದೆ ಎಂದು ಮಿಮ್ಸ್ ನಿರ್ದೇಶ ಡಾ.ನರಸಿಂಹಸ್ವಾಮಿ ಅಭಿಮಾನದಿಂದ ನುಡಿದರು. ಲಕ್ಷಕ್ಕೆ ಒಬ್ಬರಿಗೆ ಈ ರೀತಿ ಆಗುವ ಸಾಧ್ಯತೆ ಇದೆ. ಇದೊಂದು ವಿಶೇಷ ಪ್ರಕರಣ. ನಾನು ಮತ್ತು ನಮ್ಮ ತಂಡ ವಿಶೇಷ ಕಾಳಜಿ ವಹಿಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡು ತಾಯಿ ಮಗುವನ್ನು ಕಾಪಾಡಿದ್ದೇವೆ.
- ಡಾ.ಲಿಂಗರಾಜು, ನ್ಯೂರೋ ಸರ್ಜನ್, ಮಿಮ್ಸ್ ಮಂಡ್ಯ
- ಡಾ.ಕೀರ್ತಿ, ಮಕ್ಕಳ ತಜ್ಞ, ಮಿಮ್ಸ್ ಮಂಡ್ಯ