ಕೆ.ಎಂ. ಮಂಜುನಾಥ್ ಕನ್ನಡಪ್ರಭ ವಾರ್ತೆ ಬಳ್ಳಾರಿ: ವರುಣನ ಅವಕೃಪೆಯಿಂದಾಗಿ ಒಂದೆಡೆ ಜಿಲ್ಲೆಯಲ್ಲಿ ಕೋಟ್ಯಂತರ ಮೌಲ್ಯದ ಒಣಮೆಣಸಿನಕಾಯಿ ಬೆಳೆ ನಾಶವಾದ ಬೆನ್ನಲ್ಲೇ ಇದೀಗ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬರಗಾಲ ಹೊಡೆತದ ನಡುವೆಯೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚೇತರಿಕೆಯ ನಿರೀಕ್ಷೆ ಹುಟ್ಟಿಸಿದ್ದ ಅಪಾರ ಪ್ರಮಾಣದ ಒಣಮೆಣಸಿನಕಾಯಿ ಬೆಳೆಗೆ ರಸಹೀರುವ ಕೀಟದ ಬಾಧೆ ಶುರುವಾಗಿದೆ. ಕೀಟದ ಬಾಧೆಯಿಂದ ಬೆಳೆಯ ಇಳುವರಿ ಭಾಗಶಃ ಇಳಿಮುಖವಾಗಲಿದ್ದು, ಬೆಳೆಗೆ ಮಾಡಿದ ಖರ್ಚು ಸಹ ಕೈಗೆಟಕುವುದು ಕಷ್ಟಸಾಧ್ಯ ಎಂಬುದು ರೈತರ ಅಳಲು. ದುಬಾರಿ ಕೃಷಿ ವೆಚ್ಚಗಳಿಂದಾಗಿ ರೋಗ ಹತೋಟಿಗೆ ಮತ್ತೆ ಕೀಟನಾಶಕಗಳ ಮೊರೆ ಹೋಗುವ ಧೈರ್ಯವೂ ಇಲ್ಲವಾಗಿದೆ. ಹೀಗಾಗಿ ಬಂದಷ್ಟು ಬರಲಿ ಎಂದು ಕೈಚೆಲ್ಲಿ ಕುಳಿತಿದ್ದೇವೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬೆಳೆಯ ಪ್ರಮಾಣ ಎಷ್ಟೆಷ್ಟು?: ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 37962 ಹೆಕ್ಟೇರ್ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗಿದೆ. ಈ ಪೈಕಿ ಬಳ್ಳಾರಿ ತಾಲೂಕಿನಲ್ಲಿ 12,223 ಹೆಕ್ಟೇರ್, ಕುರುಗೋಡು 10,509 ಸಿರುಗುಪ್ಪ 11,901 ಕಂಪ್ಲಿ 1862 ಹಾಗೂ ಸಂಡೂರು ತಾಲೂಕಿನಲ್ಲಿ 460 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಈ ಬಾರಿಯ ಮುಂಗಾರು ಹಂಗಾಮಿನ ವೈಫಲ್ಯದಿಂದಾಗಿ 5699.47 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಎಚ್‌ಎಲ್‌ಸಿ ಕಾಲುವೆ ನೀರು ಹಾಗೂ ಪಂಪ್‌ಸೆಟ್‌ಗಳ ಅವಲಂಬಿತಗೊಂಡಿರುವ ಇನ್ನು 31,257 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಜೀವಂತವಿದೆ. ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಬೆಳೆ ಕೈಗೆಟುಕುವ ಮುನ್ನವೇ ಕಾಲುವೆಯಲ್ಲಿ ನೀರು ಸ್ಥಗಿತಗೊಳ್ಳುವ ಭೀತಿ ನಡುವೆ, ರೈತರಿಗೆ ರಸಹೀರುವ ಕೀಟಬಾಧೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಕರೆಗೆ ₹70 ಸಾವಿರ ನಷ್ಟ: ಮುಂಗಾರು ಮಳೆ ಕೈಕೊಟ್ಟಿತು. ಜಲಾಶಯದಲ್ಲೂ ನೀರಿಲ್ಲ. ಉಳಿದಿರುವ ಒಂದಷ್ಟು ಒಣಮೆಣಸಿನಕಾಯಿ ಬೆಳೆ ಕೈಗೆಟಕುತ್ತದೆ ಎಂಬ ಸಣ್ಣ ನಿರೀಕ್ಷೆಯಲ್ಲಿರುವಾಗಲೇ ಎಲ್ಲ ಕಡೆ ರಸಹೀರುವ ಕೀಟದ ಬಾಧೆ ಶುರುವಾಗಿದೆ. ಇದರಿಂದ ಬೆಳೆಯ ಭಾಗಶಃ ಇಳುವರಿ ಕುಸಿತವಾಗಲಿದೆ. ಈಗಾಗಲೇ ಸಾಕಷ್ಟು ಖರ್ಚು ಮಾಡಿಕೊಂಡಿರುವ ರೈತರು ಕೀಟಬಾಧೆ ನಿಯಂತ್ರಣಕ್ಕೆ ಮತ್ತೆ ಖರ್ಚು ಮಾಡುವ ಸ್ಥಿತಿಯಲ್ಲಿಲ್ಲ. ಬೆಳೆ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಬಹುತೇಕ ರೈತರು ಕೈಬಿಟ್ಟಿದ್ದಾರೆ ಎನ್ನುತ್ತಾರೆ ತಾಲೂಕಿನ ಸಂಗನಕಲ್ಲು ಗ್ರಾಮದ ರೈತರಾದ ಕೆ.ಗಾದಿಲಿಂಗಪ್ಪ, ಮಣ್ಣೂರು ಮಹೇಶ್ ಹಾಗೂ ವಿಜಯಕಾಂತ್. ಕನ್ನಡಪ್ರಭ ಜತೆ ಅಳಲು ತೋಡಿಕೊಂಡ ರೈತರು, ಮಳೆ ಅಭಾವದಿಂದ ಈ ಬಾರಿ ಎಚ್‌ಎಲ್‌ಸಿ ಕಾಲುವೆಗೆ 40 ದಿನ ತಡವಾಗಿ ನೀರು ಬಿಡಲಾಯಿತು. ಜಲಾಶಯದಲ್ಲಿ ನೀರಿಲ್ಲದ ಕಾರಣ ನ. 10ಕ್ಕೆ ಕಾಲುವೆ ನೀರು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಈ ಬಾರಿ ಸುಮಾರು 90 ದಿನಗಳ ಕಾಲ ನೀರಿನ ವ್ಯತ್ಯಯವಾಯಿತು. ಹೀಗಾಗಿ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿತು. ಒಣಮೆಣಸಿನಕಾಯಿ ಬೆಳೆಗೆ ಕನಿಷ್ಠವೆಂದರೂ ಎಕರೆಗೆ ₹60ರಿಂದ ₹70 ಸಾವಿರ ಖರ್ಚಾಗಿದೆ. ಭೂರಹಿತರು ಎಕರೆಗೆ ಇಂತಿಷ್ಟೆಂದು ಭೂ ಮಾಲೀಕರಿಗೆ ಹಣ ನೀಡಿ ಒಣಮೆಣಸಿನಕಾಯಿ ಬೆಳೆದಿದ್ದಾರೆ. ಇದರಿಂದ ಎಕರೆಗೆ ₹90 ಸಾವಿರದಿಂದ ₹1 ಲಕ್ಷ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಅನೇಕ ರೈತ ಕುಟುಂಬಗಳು ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಗೆ ದುಡಿಯಲು ತೆರಳುತ್ತಿದ್ದಾರೆ ಎಂದು ರೈತ ಸಂಕಷ್ಟದ ದಿನಗಳನ್ನು ವಿವರಿಸಿದರು. ₹5.85 ಕೋಟಿ ಬೆಳೆನಷ್ಟದ ವರದಿ: ಬರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಂಗಾರಿನ ಒಣಮೆಣಸಿನಕಾಯಿ ಬೆಳೆನಷ್ಟ ₹5.85 ಕೋಟಿಗಳಷ್ಟಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. 5699 ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟ ಅಂದಾಜಿಸಲಾಗಿದ್ದು, ಇದರ ಬೆಳೆನಷ್ಟದ ಪ್ರಮಾಣ ₹5.85 ಕೋಟಿಗಳಷ್ಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಣಮೆಣಸಿನಕಾಯಿ ಬೆಳೆಗೆ ರಸಹೀರುವ ಕೀಟದ ಬಾಧೆ ಕಂಡುಬಂದಿದೆ. ಕೀಟ ನಿಯಂತ್ರಣಕ್ಕೆ ರೈತರಿಗೆ ಸಲಹೆಗಳನ್ನು ನೀಡುತ್ತಿದ್ದೇವೆ. ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ರಸಹೀರುವ ಕೀಟದಿಂದ ಇಳುವರಿ ಕುಸಿತವಾಗಲಿದೆ. ರೈತರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ತಿಳಿಸಿದರು.