ಬಳ್ಳಾರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ತಕ್ಷಣ ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಡಾ.ಎನ್.ಪ್ರಮೋದ್, ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ 13 ಕೋಟಿಗೂ ಅಧಿಕ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರನ್ನು ಹೊರತುಪಡಿಸಿ ಉಳಿದ ಇಬ್ಬರು ಚುನಾವಣಾ ಆಯುಕ್ತರು 14 ಬಾರಿ ಆಕ್ಷೇಪಣೆ ಹಾಗೂ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕ್ಯಾಬಿನೆಟ್ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ. ಫಾರ್ಮ್-6ರ ಬದಲಾವಣೆ ಸೇರಿದಂತೆ ಪ್ರಮುಖ ನಿರ್ಧಾರ ಇತರ ಆಯುಕ್ತರ ಗಮನಕ್ಕೆ ತರದೆ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎಂದು ದೂರಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಡಿ. ನಾಗಲಕ್ಷ್ಮಿ ಮಾತನಾಡಿ, ದೇಶದ ವಿವಿಧೆಡೆ ಬಿಜೆಪಿ ಮುಖಂಡರು ಲಕ್ಷಾಂತರ ಫಾರ್ಮ್-7 ಅರ್ಜಿ ಸಲ್ಲಿಸುವ ಮೂಲಕ ಮತದಾರರ ಹೆಸರು ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮತದಾರರ ವೈಯಕ್ತಿಕ ವಿವರಗಳನ್ನೊಳಗೊಂಡ ಮುದ್ರಿತ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಹೇಗೆ ಲಭ್ಯವಾಗುತ್ತಿವೆ ಎಂಬುದರ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ನೆಪದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಎಷ್ಟು ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ ಎಂಬುದರ ಕುರಿತು ಕೇಂದ್ರ ಸರ್ಕಾರವಾಗಲಿ, ಚುನಾವಣಾ ಆಯೋಗವಾಗಲಿ ಸ್ಪಷ್ಟ ಅಂಕಿ-ಅಂಶ ಬಹಿರಂಗಪಡಿಸಿಲ್ಲ ಎಂದು ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ. ದೇವದಾಸ್ ದೂರಿದರು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಆರ್.ಸೋಮಶೇಖರ್ ಗೌಡ, ಎ. ಶಾಂತ, ಗೋವಿಂದ್, ಹನುಮಂತಪ್ಪ, ಈಶ್ವರಿ, ಕೋಳೂರು ಪಂಪಾಪತಿ, ಬಸಣ್ಣ, ಸುರೇಶ್, ವಿಜಯಲಕ್ಷ್ಮಿ, ಗುರಳ್ಳಿ ರಾಜ, ಜಗದೀಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.