ವೀಳ್ಯದೆಲೆ ದಿಢೀರನೆ ಬೆಲೆ ಕುಸಿತ: ರೈತರು ಕಂಗಾಲು

KannadaprabhaNewsNetwork |  
Published : Jul 15, 2025, 11:45 PM IST
15ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಪೊಲೇನಹಳ್ಳಿ ಗ್ರಾಮದ ಗೋವಿಂದಪ್ಪ ವೀಳ್ಯದೆಲೆ ತೋಟದಲ್ಲಿ ಬಳ್ಳಿ ಕಟ್ಟುತ್ತಿರುವುದು. | Kannada Prabha

ಸಾರಾಂಶ

ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಹೊರೆಗೆ 12,000 ವೀಳ್ಯದೆಲೆಯ ಒಂದು ಹೊರೆಗೆ ಸರಾಸರಿ 14,000 ದರವಿತ್ತು. ಮೂಡಣ ದಿಕ್ಕಿನಿಂದ ಗಾಳಿ ಬೀಸುತ್ತಿದ್ದಾಗ ವೀಳ್ಯದೆಲೆ ಇಳುವರಿ ಕುಂಠಿತವಾಗುತ್ತದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ರಾಮೀಣ ಭಾಗದ ರೈತರ ಪ್ರಮುಖ ಆದಾಯ ಮೂಲವಾಗಿರುವ ವೀಳ್ಯದೆಲೆ ದರ ದಿಡೀರನೆ ಕುಸಿದಿರುವುದರಿಂದ ರೈತರ ಕಂಗಾಲಾಗುವಂತಾಗಿದೆ. ಉತ್ತಮ ಮಳೆ ಹಾಗೂ ತೇವಾಂಶ ಹೆಚ್ಚಳದಿಂದಾಗಿ ಉತ್ತಮ ಫಸಲು ಕೈ ಸೇರಿದರೂ ಬೆಲೆ ಪಾತಾಳಕ್ಕೆ ಇಳಿದಿರುವುದರಿಂದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ.

ತಾಲೂಕಿನಲ್ಲಿ 260 ಹೆಕ್ಟೇರ್ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸಾವಿರಾರು ರೈತರು ಈ ಬೆಳೆಯನ್ನೇ ಅವಲಂಬಿಸಿದ್ದಾರೆ. ಮೂರು ತಿಂಗಳಿಂದ ಇಳಿ ಮುಖವಾಗಿರುವ ಬೆಲೆ, ಏರಿಕೆಯ ಹಾದಿಗೆ ಮರಳುವ ಲಕ್ಷಣಗಳು ಗೋಚರಿಸದೇ ಅವರ ಆತಂಕ ದ್ವಿಗುಣಗೊಂಡಿದೆ.

ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಹೊರೆಗೆ 12,000 ವೀಳ್ಯದೆಲೆಯ ಒಂದು ಹೊರೆಗೆ ಸರಾಸರಿ 14,000 ದರವಿತ್ತು. ಮೂಡಣ ದಿಕ್ಕಿನಿಂದ ಗಾಳಿ ಬೀಸುತ್ತಿದ್ದಾಗ ವೀಳ್ಯದೆಲೆ ಇಳುವರಿ ಕುಂಠಿತವಾಗುತ್ತದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿ ಬೆಲೆ ಹೆಚ್ಚಾಗಿತ್ತು. ಏಪ್ರಿಲ್‌ ಬಳಿಕ ಮಳೆ ಆರಂಭವಾಗಿದ್ದರಿಂದ ವೀಳ್ಯದೆಲೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಬೆಲೆ ಇಳಿಯುತ್ತ ಸಾಗಿತು. ಜೂನ್‌ನಲ್ಲಿ ಇದು ಕನಿಷ್ಠಕ್ಕೆ ತಲುಪಿದ್ದು, ವೀಳ್ಯದೆಲೆಯ ಪ್ರತಿ ಹೊರೆಗೆ ಮಾರುಕಟ್ಟೆಯಲ್ಲಿ 2,500 ದರವಿದೆ.

ಪ್ರತಿ ವರ್ಷ ಸಾಮಾನ್ಯವಾಗಿ ಜೂನ್‌ ಬಳಿಕ ದರ ಕಡಿಮೆಯಾಗುತ್ತಿತ್ತು. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಪರಿಣಾಮ ವೀಳ್ಯದೆಲೆ ಇಳುವರಿ ಹೆಚ್ಚಿತು. ಇದರಿಂದ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗುತ್ತ ಸಾಗಿದೆ. ಇದೇ ಬೆಲೆ ಸಿಕ್ಕರೆ ವೀಳ್ಯದೆಲೆ ಬೆಳೆಯಿಂದ ವಿಮುಖವಾಗ ಬೇಕಾಗುತ್ತದೆ ಎಂದು ಪೋಲೇನಹಳ್ಳಿ ರೈತ ಗೋವಿಂದಪ್ಪ ಅಳಲು ತೋಡಿಕೊಂಡರು.ತಾಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ವೀಳ್ಯದೆಲೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಯ ಜೊತೆಗೆ, ರೈತರು 10 ಗುಂಟೆಯಿಂದ ಒಂದೂವರೆ ಎಕರೆವರೆಗೆ ವೀಳ್ಯದೆಲೆ ತೋಟ ಹೊಂದಿದ್ದಾರೆ. ಕಾಮಸಮುದ್ರ, ಬಂಗಾರಪೇಟೆ, ಬೂದಿಕೋಟೆ ಮತ್ತು ಆಂಧ್ರ ಪ್ರದೇಶ ಕುಪ್ಪಂ, ತಮಿಳುನಾಡಿನ ವೆಪನಪೆಲ್ಲಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಇಲ್ಲಿಂದ ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಹಲವೆಡೆಗೆ ವೀಳ್ಯದೆಲೆ ರವಾನೆಯಾಗುತ್ತದೆ. ಕೆಲವೊಮ್ಮೆ ಹೊರ ರಾಜ್ಯಕ್ಕೂ ಸಾಗಣೆಯಾಗುತ್ತದೆ.

ವೀಳ್ಯದೆಲೆ ಬಳ್ಳಿಯ ಪೋಷಣೆಗೆ ಹೆಚ್ಚು ನಿಗಾ ವಹಿಸಬೇಕು. ನಿತ್ಯವೂ ತೋಟದಲ್ಲಿದ್ದು ಬಳ್ಳಿಯನ್ನು ಆರೈಕೆ ಮಾಡಬೇಕು. ಕಳೆ ತೆಗೆಯುವುದು, ಬಳ್ಳಿ ಕಟ್ಟುವುದು, ನೀರು ಹಾಯಿಸುವ ಕೆಲಸ ಪ್ರತಿ ದಿನ ಇರುತ್ತದೆ. ವೀಳ್ಯದೆಲೆ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ದಿನವೊಂದಕ್ಕೆ 600 ರುಪಾಯಿಗಳ ಕೂಲಿ ನೀಡಬೇಕು. ಮಾರುಕಟ್ಟೆಯಲ್ಲಿ ಸಿಗುವ ದರದಲ್ಲಿ ನಿರ್ವಹಣಾ ವೆಚ್ಚ ಕೂಡ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಳೆಗಾರ ಮುನಿಯಪ್ಪ.

ತಾಲೂಕಿನಲ್ಲಿ ಬೆಳೆಯುವ ವೀಳ್ಯದೆಲೆಯನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಪೂಜೆಗೂ ಈ ಎಲೆ ಬಳಕೆಯಾಗುತ್ತದೆ. ಶ್ರಾವಣದ ಬಳಿಕ ಹಬ್ಬದ ಸಾಲು ಆರಂಭವಾಗಲಿದ್ದು, ಬೆಲೆ ಚೇತರಿಸುವ ಸಾಧ್ಯತೆ ಇದೆ ಎಂಬುದು ಬೆಳೆಗಾರರು ನಿರೀಕ್ಷೆಯಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!