ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಗದಿತ ಸಮಯಕ್ಕೆ ಬಸ್ ಓಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಶಿರಹಟ್ಟಿ: ಗ್ರಾಮೀಣ ಪ್ರದೇಶದಿಂದ ಸಮರ್ಪಕ ಬಸ್ ಓಡಿಸುವಂತೆ ಆಗ್ರಹಿಸಿ ಸೋಮವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಶಿರಹಟ್ಟಿ ಶಾಖೆ ವತಿಯಿಂದ ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ಮಾಡಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅರುಣ ಬಾರ್ಕಿ ಮಾತನಾಡಿ, ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈಗಾಗಲೆ ಪದವಿ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ತರಗತಿಗಳು ಪ್ರಾರಂಭವಾಗಿ ಶೈಕ್ಷಣಿಕ ವರ್ಷ ಕೊನೆ ಹಂತಗೊಳ್ಳುತ್ತಿದೆ. ನಿತ್ಯ ಗ್ರಾಮೀಣ ಪ್ರದೇಶಗಳಿಂದ ಜಿಲ್ಲಾ ಕೇಂದ್ರ ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ನಗರಗಳಿಗೆ ಹೈಸ್ಕೂಲ್, ಕಾಲೇಜ ಶಿಕ್ಷಣಕ್ಕೆ ಹೋಗುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಅಂತಿಮ ವರ್ಷದ ಪದವಿ ತರಗತಿಗಳು ಶುರುವಾದರೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಗದಿತ ಸಮಯಕ್ಕೆ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು.

ದಿನಕ್ಕೆ ಒಂದು ಅಥವಾ ಎರಡು ಬಸ್‌ಗಳು ಸಂಚರಿಸುವ ಬಹುತೇಕ ಹಳ್ಳಿಗಳು ತಾಲೂಕಿನಲ್ಲಿವೆ. ಇಂತಹ ಹಳ್ಳಿಯ ವಿದ್ಯಾರ್ಥಿಗಳು ತರಗತಿಯ ಸಮಯಕ್ಕೆ ಶಾಲೆ-ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಬರಿ ಹಾರಿಕೆ ಉತ್ತರ ನೀಡಿ ಸಮಜಾಯಿಸಿ ಕಳುಹಿಸುತ್ತಾರೆ. ಸರ್ಕಾರ ಶೈಕ್ಷಣಿಕ ಅಭಿವೃದ್ದಿಗೆ ಏನೆಲ್ಲ ಸೌಲಭ್ಯಗಳನ್ನು ನೀಡಿದರೂ ಅದು ಉಪಯೋಗಕ್ಕೆ ಬರದಂತಾಗಿದೆ ಎಂದು ದೂರಿದರು.

ಸಾರಿಗೆ ಇಲಾಖೆ ಅಧಿಕಾರಿ ಆಗಮನ: ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸುವಾಗ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಶಿವಾನಂದ ಹಕ್ಕಾಪಕ್ಕಿ ಸ್ಥಳಕ್ಕೆ ಆಗಮಿಸಿ ಮತ್ತೆ ಅದೇ ಉತ್ತರ ಹೇಳಲು ಮುಂದಾದಾಗ ವಿದ್ಯಾರ್ಥಿಗಳು ಸಿಟ್ಟಿಗೆದ್ದು, ನಿಮ್ಮ ಹಾರಿಕೆ ಉತ್ತರ ನಮಗೆ ಬೇಕಿಲ್ಲ. ನೀವು ಸದ್ಯದ ಪರಿಸ್ಥಿತಿ ಹತೋಟಿಗೆ ತರಲು ಮಾತ್ರ ಭರವಸೆ ನೀಡುತ್ತಿದ್ದು, ನಿತ್ಯ ನಮಗಾಗುವ ತೊಂದರೆಗೆ ಕಿಂಚಿತ್ತು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ತುರ್ತು ಬೆಳಗ್ಗೆ ೭.೧೫ ಗಂಟೆಗೆ ಶಿರಹಟ್ಟಿಯಿಂದ ಗದಗ, ಮಧ್ಯಾಹ್ನ ಗದಗನಿಂದ ಶಿರಹಟ್ಟಿ ಬರಲು ಬಸ್ ವ್ಯವಸ್ಥೆ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಬಸ್ ಓಡಿಸಬೇಕು. ಶಿರಹಟ್ಟಿಯಿಂದ ಲಕ್ಷ್ಮೇಶ್ವರಕ್ಕೆ ಹೋಗಲು ೨, ೩, ೪ ಗಂಟೆಗೆ ಬಸ್ ಬಿಡಬೇಕು. ಕಾಲೇಜ ವಿದ್ಯಾರ್ಥಿಗಳು ಕಂಡಲ್ಲಿ ಹತ್ತಿಸಿಕೊಂಡು ಹೋಗಬೇಕು. ಜತೆಗೆ ಶಾಲೆ, ಕಾಲೇಜ ಪ್ರಾರಂಭದ ಸಮಯ ಹಾಗೂ ಕಾಲೇಜು ಬಿಡುವ ವೇಳೆ ತಪ್ಪದೇ ಬಸ್ ಓಡಿಸಬೇಕು ಎಂದರು.

ಸಿಪಿಐ ನಾಗರಾಜ ಮಾಡಳ್ಳಿ ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ಹೇಳಿದರು. ಅಲ್ಲದೇ ಸಾರಿಗೆ ಇಲಾಖೆ ಅದಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಪರಶುರಾಮ ಕಳ್ಳಿಮನಿ, ಅಭಿಷೇಕ್ ಬೋರ್‌ಶೆಟ್ಟರ್, ಕಿರಣ್ ಮಜ್ಜಿಗೌಡ, ದಾನೇಶ ನವೀನ್ ಬಿಸಿ, ರವಿ ಕಪ್ಪತ್ನವರ್ ಮತ್ತು ಎಲ್ಲಾ ಕಾಲೇಜಿನ ವಿದ್ಯಾರ್ಥಿನಿಯರು ಇದ್ದರು.

Share this article