ಹೇಮಾವತಿ ಜಲಾಶಯಿಂದ ಏಕಾಏಕಿ ಹೆಚ್ಚಿನ ನೀರು ಬಿಡುಗಡೆ

KannadaprabhaNewsNetwork |  
Published : Sep 02, 2025, 01:00 AM IST
1ಕೆಎಂಎನ್ ಡಿ17,18 | Kannada Prabha

ಸಾರಾಂಶ

ಹೇಮಾವತಿ ಜಲಾಶಯದಿಂದ ಏಕಾಏಕಿ ಹೆಚ್ಚಿನ ನೀರು ಬಿಟ್ಟ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಬಂಡೀಹೊಳೆ ಗ್ರಾಮದ ಬಳಿ ಹೇಮಾವತಿ ನದಿ ಮಧ್ಯೆ ಪ್ರವಾಹಕ್ಕೆ ಸಿಲುಕಿದ್ದ ಎರಡು ಹಸುಗಳನ್ನು ಸಾಹಸ ಕಾರ್ಯಾಚರಣೆ ಮೂಲಕ ಪಟ್ಟಣದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ಜಲಾಶಯದಿಂದ ಏಕಾಏಕಿ ಹೆಚ್ಚಿನ ನೀರು ಬಿಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಬಂಡೀಹೊಳೆ ಗ್ರಾಮದ ಬಳಿ ಹೇಮಾವತಿ ನದಿ ಮಧ್ಯೆ ಪ್ರವಾಹಕ್ಕೆ ಸಿಲುಕಿದ್ದ ಎರಡು ಹಸುಗಳನ್ನು ಸಾಹಸ ಕಾರ್ಯಾಚರಣೆ ಮೂಲಕ ಪಟ್ಟಣದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಗ್ರಾಮದ ಸಿದ್ದೇಗೌಡರ ಪುತ್ರ ಹರೀಶ ತಮ್ಮ ಎರಡು ಹಸುಗಳನ್ನು ಹೇಮಾವತಿ ನದಿ ನಡುವೆ ಇರುವ ಖಾಲಿ ಜಾಗದಲ್ಲಿ ಎಂದಿನಂತೆ ಮೇಯಲು ಬಿಟ್ಟಿದ್ದರು. ನದಿ ಒಳಗಿನ ಖಾಲಿ ಜಾಗದಲ್ಲಿ ಸಂವೃದ್ಧವಾದ ಮೇವು ದೊರಕುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಖಾಲಿ ಬಯಲಿನಲ್ಲಿ ಇಲ್ಲಿನ ಜನ ತಮ್ಮ ಹಸುಗಳನ್ನು ಮೇಯಲು ಬಿಡುವುದು ಸಾಮಾನ್ಯವಾಗಿದೆ.

ಆದರೆ, ಯಾವುದೇ ಪೂರ್ವ ಸೂಚನೆಯಿಲ್ಲದೆ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಅಧಿಕ ನೀರು ಬಿಟ್ಟ ಪರಿಣಾಮ ನದಿ ಮಧ್ಯೆ ಖಾಲಿ ಜಾಗವನ್ನು ಬಿಟ್ಟು ಸುತ್ತಲೂ ಪ್ರವಾಹದ ರೀತಿ ನೀರು ಆವರಿಸಿತು. ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಮೇಯುತ್ತಿದ್ದ ಹಸುಗಳು ನದಿ ನಡುವೆ ಸಿಲುಕಿ ಹೊರಬರಲಾಗದೆ ಚಡಪಡಿಸುತ್ತಿದ್ದವು.

ನದಿ ನೀರಿನ ಪ್ರಮಾಣ ಹೆಚ್ಚಿದ್ದು ಹಸುಗಳು ಅಪಾಯಕ್ಕೆ ಸಿಲುಕುತ್ತಿರುವುದನ್ನು ಮನಗಂಡ ಹಸುಗಳ ಮಾಲೀಕ ಹರೀಶ್ ಪಟ್ಟಣದ ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿ ಸಹಾಯಕ್ಕೆ ಯಾಚಿಸಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೃಹತ್ ಕ್ರೇನ್ ಮೂಲಕ ಕಾರ್ಯಚರಣೆ ಆರಂಭಿಸಿದರು.

ನಂತರ ಸಿಬ್ಬಂದಿ ನದಿಯೊಳಗೆ ಇಳಿದು ಸುರಕ್ಷತಾ ಹಗ್ಗ ಬಳಸಿ ಕ್ರೇನ್ ಮೂಲಕ ಸುರಕ್ಷಿತವಾಗಿ ಮೇಲೆತ್ತಿ ಹಸುಗಳ ಜೀವ ರಕ್ಷಿಸಿದರು. ಕಾರ್ಯಚರಣೆ ವೇಳೆ ಬಂಡಿಹೊಳೆ ಹಾಗೂ ಸುತ್ತಮುತ್ತಲ ನೂರಾರು ಜನ ಸ್ಥಳದಲ್ಲಿದ್ದು ಸಾಹಸ ಕಾರ್ಯಾಚರಣೆಯನ್ನು ವೀಕ್ಷಿಸಿ ಅಗ್ನಿ ಶಾಮಕ ಸಿಬ್ಬಂದಿಯನ್ನು ಅಭಿನಂದಿಸಿದರು.

ಅಗ್ನಿ ಶಾಮಕ ಠಾಣೆ ಸಿಬ್ಬಂದಿ ದಿನೇಶ್, ಪ್ರದೀಪ್ ಕುಮಾರ್, ಸಚಿನ್, ಪ್ರತಾಪ, ಚಂದನ್, ಅಶೋಕ್, ಶ್ರೀಧರ್, ಯಮನಪ್ಪ, ಓಂಕಾರ ಮತ್ತು ಮೌನೇಶ್ ಕಾರ್ಯಾಚರಣೆಯಲ್ಲಿದ್ದು, ಸಾರ್ವಜನಿಕರ ಅಭಿನಂದನೆಗೆ ಪಾತ್ರರಾದರು.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ