ಬಡವರು, ಅಲ್ಪ ಸಂಖ್ಯಾತರಿಗೆ ಆಶಾಕಿರಣವಾಗಿದ್ದ ಸುಧಾಕರ್

KannadaprabhaNewsNetwork |  
Published : May 11, 2026, 01:15 AM IST
ಸುಧಾಕರ್, ಹಿರಿಯೂರು ಸುದ್ದಿ 111 | Kannada Prabha

ಸಾರಾಂಶ

ಹಣ ಬಲ, ಜನಬಲವಿಲ್ಲದವರ ಗುರುತಿಸಿ ರಾಜಕೀಯ ಅಧಿಕಾರ । ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜನತೆಗೆ ಇದು ಬಹುದೊಡ್ಡ ಆಘಾತ. ಸಚಿವ ಡಿ.ಸುಧಾಕರ್ ರವರ ಅನಿರೀಕ್ಷಿತ ಸಾವು ತಾಲೂಕಿನ ಜನರನ್ನು ಕಂಗೆಡಿಸಿದೆ. ಸಾವಿರಾರು ಜನರ ಮುಖದಲ್ಲಿ ನೋವಿನ ಗೆರೆ, ಇದೇನಾಯ್ತು ಎಂಬ ಆತಂಕ. ಅವರ ಆರೋಗ್ಯ ಸುಧಾರಿಸಿ ಮೊದಲಿನಂತೆ ಕ್ಷೇತ್ರದ ತುಂಬಾ ಓಡಾಡಲಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ವಿಧಿಯ ಆಟ ಬೇರೆಯೇ ಇದ್ದಂತಿತ್ತು. ಬಡವರ, ಅಲ್ಪ ಸಂಖ್ಯಾತರ ಪಾಲಿನ ಆಶಾಕಿರಣವಾಗಿದ್ದ ಸಚಿವ ಡಿ.ಸುಧಾಕರ್ ರವರು ಅಭಿವೃದ್ಧಿ ವಿಚಾರದಲ್ಲಿ ಎಂದೂ ಹೆಜ್ಜೆ ಹಿಂದೆ ಇಟ್ಟವರಲ್ಲ.

ಇವತ್ತು ತಾಲೂಕಿನ ಯಾವ ಹಳ್ಳಿಗೆ ಹೋದರೂ ಸಹ ಸುಧಾಕರ್ ರವರು ಮಾಡಿದ ಅಭಿವೃದ್ಧಿ ಕಾರ್ಯಗಳು ಕಾಣುತ್ತವೆ. ಅನೇಕ ಶಾಲಾ ಕಾಲೇಜ್ ಗಳನ್ನು ತಾಲೂಕಿಗೆ ತಂದು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದರು. ಬುದ್ಧಿವಂತ ಮಕ್ಕಳನ್ನು ಇನ್ನೂ ಚನ್ನಾಗಿ ಓದು ಎಂದು ಉತ್ತೇಜಿಸುತ್ತಿದ್ದರು. ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಸ್ಥಳದಲ್ಲಿಯೇ ಲಕ್ಷಗಟ್ಟಲೆ ಸಹಾಯ ಘೋಷಣೆ ಮಾಡುತ್ತಿದ್ದರು. ನುಡಿದಂತೆ ಒಂದೆರಡು ದಿನಗಳಲ್ಲಿಯೇ ಆ ಮಕ್ಕಳ ಪೋಷಕರಿಗೆ ಹಣ ತಲುಪುತ್ತಿತ್ತು.

ಅಶಕ್ತರು, ದನಿ ಸತ್ತವರು, ಜಾತಿ ಬೆಂಬಲ ಇಲ್ಲದವರು, ಹಣವಿಲ್ಲದವರನ್ನು ಗುರುತಿಸಿ ಅವರಿಗೆ ರಾಜಕೀಯ ಅಧಿಕಾರ ನೀಡಿದ ಕೀರ್ತಿ ಸಚಿವರದ್ದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಸ್ತುತ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾಗಿದ್ದ ಅವರು ನಾಲ್ಕು ಬಾರಿ ಶಾಸಕರಾಗಿದ್ದರು. ಮಾರ್ಚ್ 28, 1961ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದ ಅವರು ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು.

ಪದವಿ ಶಿಕ್ಷಣ ಮುಗಿಸಿದ ಬಳಿಕ ಬ್ಯುಸಿನೆಸ್ ಕಡೆ ಗಮನಹರಿಸಿದ್ದ ಅವರು ನಂತರ ಶ್ರೀಮತಿ ಹರ್ಷಿಣಿ ಎಂಬುವರೊಂದಿಗೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಒಂದು ಗಂಡು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಇವರ ಚಿಕ್ಕಪ್ಪ ಎನ್. ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದಲ್ಲಿ 1978 ಹಾಗೂ 1989ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಿ.ಸುಧಾಕರ್ ರಾಜಕೀಯ ಪಟ್ಟುಗಳನ್ನು ಅಲ್ಲಿಂದಲೇ ಕರಗತ ಮಾಡಿಕೊಂಡರು.

ಡಿ.ಸುಧಾಕರ್‌ ಅವರು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 47,550 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಂತರ ಚಳ್ಳಕೆರೆ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ್ದರಿಂದ 2008ರಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ದಿಢೀರ್ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 43,078 ಮತಗಳನ್ನು ಪಡೆದು 16,158 ಮತಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿದ್ದರು. ಈ ಮೂಲಕ ಅವರು ಬಿಜೆಪಿ ಸರ್ಕಾರದಲ್ಲಿ ಮೊದಲ ಬಾರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸಿದರು. ಬದಲಾದ ಸಮಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾಗಿ ಮುಂದುವರೆದರು. ಇನ್ನು 2013ರಲ್ಲಿ ಡಿ.ಸುಧಾಕರ್ ಅವರಿಗೆ ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡಿತ್ತು. ಜೆಡಿಎಸ್ ಅಭ್ಯರ್ಥಿ ದಿವಂಗತ ಎ.ಕೃಷ್ಣಪ್ಪ ವಿರುದ್ಧ 71,661 ಮತ ಪಡೆದು ಕೂದಲೆಳೆ ಅಂತರದಲ್ಲಿ ಅಂದರೆ 1,205 ಮತಗಳನ್ನು ಪಡೆದು ಮರು ಆಯ್ಕೆಯಾದರು. ಇದರ ಜೊತೆಗೆ ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸಹ ಆಯ್ಕೆಯಾದರು. ನಂತರ 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 64,858 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸುಮಾರು 12 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. ಆದರೆ ಸೋತೆ ಎಂದು ಅವರು ಸುಮ್ಮನೆ ಕೂರಲಿಲ್ಲ. ಕ್ಷೇತ್ರದ ಇಂಚಿoಚು ಜಾಗ ಬಿಡದೇ ಓಡಾಡಿದರು. ಆದ ತಪ್ಪುಗಳನ್ನು ನಿರ್ಧಾಕ್ಷಿಣ್ಯವಾಗಿ ತಿದ್ದಿಕೊಂಡರು. ಹಿರಿಯೂರು ಕ್ಷೇತ್ರಕ್ಕೆ ಡಿ.ಸುಧಾಕರ್ ಎಷ್ಟು ಅನಿವಾರ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು. ಅದರ ಫಲವೆಂಬoತೆ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ವಿರುದ್ಧ 30322 ಮತಗಳ ಅಂತರದಿಂದ ಗೆಲುವು ಸಾಧಿಸಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾದರು.

2008 ಮತ್ತು 2023ರಲ್ಲಿ ಮಂತ್ರಿ ಪಟ್ಟ ಗಿಟ್ಟಿಸಿದ್ದ ಡಿ.ಸುಧಾಕರ್ ರವರು ನಿಸ್ಸoದೇಹವಾಗಿ ಜನಾನುರಾಗಿ ರಾಜಕಾರಣಿ ಆಗಿದ್ದರು. ಡಿ ಸುಧಾಕರ್ ರವರ ಚಾಣಾಕ್ಷ ನಡೆಗಳಿಗೆ ಎದುರಾಳಿಗಳು ಬೆಚ್ಚಿ ಬಿದ್ದಿದ್ದರು. ಆದರೀಗ ತಾಲೂಕನ್ನು ಅನಾಥವಾಗಿಸಿ ಈ ನೆಲದಿಂದಲೇ ಎದ್ದು ಹೋಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಃಖದ ಮಡುವಿನಲ್ಲಿ ಮುಳುಗಿದ ಹಿರಿಯೂರು
ಸುಧಾಕರ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ