ಸಕ್ಕರೆ ಕಾರ್ಖಾನೆಯಿಂದ ರೈತರ ಸುಲಿಗೆ: ಸುನೀಲ್‌ ಹೆಗಡೆ ಆರೋಪ

KannadaprabhaNewsNetwork |  
Published : Oct 25, 2025, 01:00 AM IST
24ಎಚ್.ಎಲ್.ವೈ-1: ಬಿಜೆಪಿ ಘಟಕ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರುಗಳಾದ  ಸುನೀಲ ಹೆಗಡೆ ಹಾಗೂ ಎಸ.ಎಲ್.ಘೋಟ್ನೇಕರ ಮಾತನಾಡಿದರು.  | Kannada Prabha

ಸಾರಾಂಶ

ಈಐಡಿ ಸಕ್ಕರೆ ಕಾರ್ಖಾನೆಯು ರೈತರ ಹಿತಚಿಂತನೆ ಕಾಪಾಡುವ ಬದಲು ರೈತರನ್ನು ವ್ಯವಸ್ಥಿತವಾಗಿ ಸುಲಿಯುವ ಕಾರ್ಯ ಮುಂದುವರಿಸಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆಪಾದಿಸಿದರು. ಬಿಜೆಪಿ ಅ. 27ರಿಂದ ನಮ್ಮ ದುಡ್ಡು-ನಮ್ಮ ಹಕ್ಕು ಎಂಬ ಹೋರಾಟ ಆರಂಭಿಸಲಿದೆ ಎಂದರು.

ಹಳಿಯಾಳ: ಈಐಡಿ ಸಕ್ಕರೆ ಕಾರ್ಖಾನೆಯು ರೈತರ ಹಿತಚಿಂತನೆ ಕಾಪಾಡುವ ಬದಲು ರೈತರನ್ನು ವ್ಯವಸ್ಥಿತವಾಗಿ ಸುಲಿಯುವ ಕಾರ್ಯ ಮುಂದುವರಿಸಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆಪಾದಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಆರಂಭವಾದರೆ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ತಾಲೂಕಿನ ರೈತರು ಕಂಡು ಕನಸು ಹುಸಿಯಾಗಿದೆ. ನಮ್ಮದು ರೈತಪರವಾದ ಕಾರ್ಖಾನೆ, ಹದಿನೈದು ದಿನದಲ್ಲಿ ಹಣ ಪಾವತಿಸುತ್ತೇನೆ ಎಂದು ಹೇಳಿ ಅವರು ಸುಲಿಗೆ ನಡೆಸಿದ್ದಾರೆ ಎಂದರು.

ಕಾರ್ಖಾನೆಯಲ್ಲಿ ಐದಾರು ವರ್ಷಗಳಿಂದ ಕೆಲಸಕ್ಕೆ ಸೇರಿಸಿಕೊಂಡ ಸ್ಥಳೀಯ ಕಾರ್ಮಿಕರನ್ನು ಮತ್ತು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ಅವರ ಬದುಕನ್ನು ಬೀದಿಪಾಲು ಮಾಡಿದ್ದಾರೆ. ರೈತರಿಗೆ ತಾವೇ ಘೋಷಿಸಿದ ಭರವಸೆ, ವಾಗ್ದಾನಗಳನ್ನು ಮರೆತಿದ್ದಾರೆ. ವಿಶೇಷ ಸಹಾಯಧನ ನೀಡದೇ ಕಾರ್ಖಾನೆಯವರು ನುಣಚಿಕೊಳ್ಳಲಾರಂಭಿಸಿದ್ದಾರೆ. ಕಬ್ಬು ಬೆಳೆಗಾರರು ಆರಂಭಿಸಿದ ಮುಷ್ಕರಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಅ. 26ರಂದು ಪಕ್ಷದ ಕಾರ್ಯಕರ್ತರ, ರೈತ ಮೋರ್ಚಾದ ಪ್ರಮುಖರ ಸಭೆ ಕರೆದು ಹೋರಾಟದ ರೂಪುರೇಷೆ ರೂಪಿಸಿ, ಬಿಜೆಪಿ ಅ. 27ರಿಂದ ನಮ್ಮ ದುಡ್ಡು-ನಮ್ಮ ಹಕ್ಕು ಎಂಬ ಹೋರಾಟ ಆರಂಭಿಸಲಿದೆ ಎಂದು ಸುನೀಲ ಹೆಗಡೆ ಹೇಳಿದರು.

ದೇಶಪಾಂಡೆಯವರೇ ಪಾವತಿಸಲಿ: ಕಾರ್ಖಾನೆಯವರು ರೈತರಿಗೆ ಮಾಡುತ್ತಿರುವ ಮೋಸದ ಅರಿವು ಇದ್ದರೂ ಸ್ಥಳೀಯ ಶಾಸಕರು ಕಾರ್ಖಾನೆ ಪ್ರತಿನಿಧಿಗಳ ಮತ್ತು ರೈತರ ಸಭೆ ನಡೆಸುವ ನಾಟಕವಾಡಿದರು. ಕಬ್ಬಿನ ದರ, ಇನ್ನಿತರ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಸಕ್ಕರೆ ಆಯುಕ್ತರಿಗೆ ಇದೆ ಎಂಬ ಸತ್ಯ ಗೊತ್ತಿದ್ದರೂ ಸಭೆ ನಡೆಸಿ ಮಾಡಿದ್ದಾದರೂ ಏನೂ ಎಂದು ಸುನೀಲ್‌ ಹೆಗಡೆ ಪ್ರಶ್ನಿಸಿದರು. ರೈತರ ಬಗ್ಗೆ ನಿಜವಾದ ಕಳಕಳಿಯಿದ್ದರೆ ಕಾರ್ಖಾನೆಯವರು ಪಾವತಿಸಬೇಕಾಗಿದ್ದ ಬಾಕಿ ಹಣವನ್ನು ಶಾಸಕರೇ ಪಾವತಿಸಲಿ. ಇಲ್ಲವೇ ರೈತರ ಹೋರಾಟ ಬೆಂಬಲಿಸಿ ನ್ಯಾಯ ಕೊಡಿಸಿ, ಇಲ್ಲವಾದಲ್ಲಿ ನೀವು ರೈತ ವಿರೋಧಿ ಎಂದು ಪರಿಗಣಿಸಲಾಗುವುದು ಎಂದರು.

ಶಾಸಕರಿಗೆ ಅಧಿಕಾರವಿಲ್ಲ: ರೈತರು ಬೇರೆಡೆ ಕಬ್ಬು ಮಾರಾಟ ಮಾಡದಂತೆ ತಡೆಯಲು ಸ್ಥಳೀಯ ಶಾಸಕರಿಗೆ ಅಧಿಕಾರವಿದೆಯೇ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಪ್ರಶ್ನಿಸಿದರು. ಬೇರೆ ಕಾರ್ಖಾನೆಗಳಲ್ಲಿ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೂ ಹಂಚಿಕೆ ಮಾಡಲಾಗುತ್ತಿದೆ. ಆದರೆ ಈಐಡಿ ಸಕ್ಕರೆ ಕಾರ್ಖಾನೆ ಯೋಗ್ಯ ದರ ನೀಡುತ್ತಿಲ್ಲ. ಉಪ ಉತ್ಪನ್ನಗಳ ಲಾಭದ ಪಾಲನ್ನು ಸಹ ಹಂಚಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಂಗೇಶ ದೇಶಪಾಂಡೆ, ವಿಠ್ಠಲ ಸಿದ್ದಣ್ಣನವರ, ಸೋನಪ್ಪ ಸುಣಕಾರ, ಸಂತೋಷ ಘಟಕಾಂಬ್ಳೆ, ಯಲ್ಲಪ್ಪಾ ಹೊನ್ನೋಜಿ, ಪಾಂಡು ಪಾಟೀಲ ಇದ್ದರು.

PREV

Recommended Stories

ಉಪನಗರ ರೈಲು ಯೋಜನೆಗೆ ಗ್ರಹಣ - ಪ್ರಧಾನಿ ಗಡುವು ಇಂದು ಮುಕ್ತಾಯ
ಸಂಪುಟ ಪುನಾರಚನೆಗೆ 4 ತಿಂಗಳ ಹಿಂದೆಯೇ ಸೂಚನೆ ಇತ್ತು: ಸಿಎಂ