ಸಕ್ಕರೆ ಕಾರ್ಖಾನೆ ಸ್ಕ್ರಾಪ್‌ ಅವ್ಯವಹಾರ ಸಾಬೀತು: 13.92 ಕೋಟಿ ರು. ನಷ್ಟ!

KannadaprabhaNewsNetwork |  
Published : Aug 19, 2025, 01:00 AM IST
18ಸಕ್ಕರೆ | Kannada Prabha

ಸಾರಾಂಶ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಒಟ್ಟು 13.92 ಕೋಟಿ ರು. ನಷ್ಟ ಉಂಟಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

ಆಡಳಿತ ಮಂಡಳಿ ಮೇಲೆ ಕ್ರಿಮಿನಲ್‌ ತನಿಖೆ, ಇಬ್ಬರು ಅಧಿಕಾರಿಗಳ ಇಲಾಖಾ ವಿಚಾರಣೆಗೆ ನಿರ್ದೇಶನ

ಕನ್ನಡಪ್ರಭ ವಾರ್ತೆ ಉಡುಪಿ

ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಒಟ್ಟು 13.92 ಕೋಟಿ ರು. ನಷ್ಟ ಉಂಟಾಗಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಆಡಳಿತ ಮಂಡಳಿ ಮೇಲೆ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.ಕಾರ್ಖಾನೆಯ ಆರ್ಥಿಕ ನಷ್ಟಕ್ಕೆ ಆಡಳಿತ ಮಂಡಳಿ, ಹರಾಜು ತಾಂತ್ರಿಕ ಸಮಿತಿ ಹಾಗೂ ಕಾರ್ಖಾನೆಯ ಆಗಿನ ವ್ಯವಸ್ಥಾಪಕರ ಅವರ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖಾ ವರದಿಯಲ್ಲಿ ಕಂಡು ಬಂದಿದೆ. ಆದ್ದರಿಂದ ಆಡಳಿತ ಮಂಡಳಿ ಹಾಗೂ ತಾಂತ್ರಿಕ ಸಮಿತಿ ಮೇಲೆ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಹಾಗೂ ಅಧಿಕಾರಿಗಳಿಬ್ಬ ಮೇಲೆ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ ನಷ್ಟದ ಹಣವನ್ನು ಸಂಬಂಧಪಟ್ಟವರಿಂದ ವಸೂಲು ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯಂತ್ರೋಪಕರಣಗಳ ಮಾರಾಟ - ಟೆಂಡರ್‌ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ. ರಾಧಾಕೃಷ್ಣ ಹೊಳ್ಳ ಅವರನ್ನು ನೇಮಿಸಲಾಗಿದ್ದು, ಅವರು ಸಲ್ಲಿಸಿರುವ ವರದಿಯಲ್ಲಿ ಅವ್ಯವಹಾರ ಸಾಬೀತಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅವ್ಯವಹಾರ ಏನು?:

1985ರಲ್ಲಿ ಆರಂಭವಾಗಿದ್ದ ಸಕ್ಕರೆ ಕಾರ್ಖಾನೆ ಕಬ್ಬು ಮತ್ತು ಆರ್ಥಿಕ ನಷ್ಟದಿಂದ 2003-04ನೇ ಸಾಲಿನಿಂದ ಕಾರ್ಯ ಸ್ಥಗಿತಗೊಳಿಸಿತ್ತು. 17 ವರ್ಷಗಳಿಂದ ಕಾರ್ಯನಿರ್ವಹಿಸದ ಕಾರಣ ತುಕ್ಕು ಹಿಡಿದು ಹಾಳಾಗುತ್ತಿರುವ ಯಂತ್ರೋಪಕರಣ ಮತ್ತು ಕಾರ್ಖಾನೆ ಕಟ್ಟಡವನ್ನು ಟೆಂಡರ್‌ ಕಮ್‌ ಹರಾಜು ಮೂಲಕ ಮಾರಾಟ ಮಾಡಲು ಆಡಳಿತ ಮಂಡಳಿಯ ಮನವಿಯಂತೆ ಸರ್ಕಾರ ಅನುಮತಿ ನೀಡಿತ್ತು.ಟೆಂಡರ್‌ ನಿಯಮದಂತೆ ಪ್ರತಿ ಕೆಜಿಗೆ ಅತಿ ಹೆಚ್ಚು ದರ ನಮೂದಿಸಿದ ಬಿಡ್‌ದಾರರಿಗೆ ಮಾರಾಟ ಮಾಡಬೇಕಿತ್ತು. 50 ಲಕ್ಷ ರು. ಭದ್ರತಾ ಠೇವಣಿ ಹಾಗೂ 5 ಕೋಟಿ ರು. ಬ್ಯಾಂಕ್‌ ಗ್ಯಾರಂಟಿ ಪಾವತಿಸಬೇಕಾಗಿತ್ತು. ಅದರಂತೆ ನ್ಯೂ ರಾಯಲ್‌ ಟ್ರೇಡರ್ಸ್‌ ಟೆಂಡರ್ ಪಡೆದುಕೊಂಡಿತ್ತು. ಆದರೆ ನ್ಯೂ ರಾಯಲ್‌ ಟ್ರೇಡರ್ಸ್‌ ನವರಿಗೆ ಯಂತ್ರೋಪಕರಣಗಳನ್ನು ಕೆಜಿಯ ಬದಲು ಲಾಟ್‌ ಆಧಾರದಲ್ಲಿ ನೀಡಲಾಗಿತ್ತು. ಇದು ಆಡಳಿತ ಮಂಡಳಿಯಿಂದ ಟೆಂಡರ್‌ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಯಲ್‌ ಟ್ರೇಡರ್ಸ್‌ 46 ಲೋಡುಗಳಲ್ಲಿ 1139.37 ಮೆಟ್ರಿಕ್‌ ಟನ್‌ ಸ್ಕ್ರಾಪ್‌ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದೆ. ಆದರೆ 83 ಲೋಡುಗಳಲ್ಲಿ 2245.65 ಮೆಟ್ರಿಕ್‌ ಟನ್‌ ಸ್ಕ್ರಾಪ್‌ ಸಾಗಾಟ ಮಾಡಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಖರೀದಿದಾರರು ಇನ್ನೂ 12.63 ಕೋಟಿ ರು. ಮತ್ತು ಸಾಗಾಟ ಮಾಡಲಾಗಿರುವ ಕಾರ್ಖಾನೆಯ ಕಟ್ಟಡ ಹಳೆಯ ಸಾಮಾಗ್ರಿಗಳ 1.28 ಕೋಟಿ ರು. ಪಾವತಿಸಬೇಕಾಗಿದೆ ಎಂದು ವರದಿ ತಿಳಿಸಿದೆ.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!