ಕಲಾದಗಿ: ರಾಜ್ಯ ರೈತ ಮುಖಂಡ ಚುನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಸೇರಿದಂತೆ ಮತ್ತಿತರ ರೈತರನ್ನು ಬಂಧಿಸಿದ್ದನ್ನು ಖಂಡಿಸಿ ಗುರುವಾರ ಸಂಜೆ ಗದ್ದನಕೇರಿ ಕ್ರಾಸ್‍ನಲ್ಲಿ ಕಬ್ಬು ಬೆಳೆಗಾರರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ಬೆಳಗಾವಿ ಬಳಿ ಪೋಲಿಸರು ರೈತ ಮುಖಂಡ ಚುನಪ್ಪ ಪೂಜಾರಿ ಸೇರಿ ರೈತ ಮುಖಂಡರನ್ನು ಬಂಧಿಸಿದ್ದನ್ನು ಖಂಡಿಸಿ ಹಾಗೂ ಕಬ್ಬಿಗೆ ನ್ಯಾಯಯುತ ಬೆಲೆ ನೀಡಲು ಆಗ್ರಹಿಸಿ ಗುರುವಾರ ಸಮೀಪದ ತುಳಸಿಗೇರಿ ಹಾಗೂ ಗದ್ದನಕೇರಿ ಕ್ರಾಸ್‍ನಲ್ಲಿ ಕಬ್ಬು ಬೆಳೆಗಾರರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾ ಬೆಳಗ್ಗೆ ಬೆಳಗಾವಿ ಪಾದಯಾತ್ರೆ ಹೋರಾಟಕ್ಕೆ ಅಣಿಯಾಗಿದ್ದ ರೈತ ಮುಖಂಡರು ಹಾಗೂ ರೈತ ಹೋರಾಟಗಾರರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯಾಹ್ನ ಗದ್ದನಕೇರಿ ಕ್ರಾಸ್ ನಲ್ಲಿ ಜಮಾಯಿಸಿದ ರೈತರು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದ್ದನಕೇರಿಯ ರೈತ ಮುಖಂಡ ಗಣೇಶ ಪಾಟೀಲ ಮಾತನಾಡಿ, ಬೆಳಗಾವಿಯ ಬಳಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರ ಮುಖಂಡರು ಸಂಜೆ 4 ಗಂಟೆಯ ಹೊತ್ತಿಗೆ ಒಂದು ನಿರ್ಧಾರ ಹೇಳಲಿದ್ದು, ಬಳಿಕ ಪ್ರತಿಭಟನೆ ಬಗ್ಗೆ ಒಂದು ನಿರ್ಧಾರಕ್ಕೆ ಬರೋಣ ಎಂದು ತೀರ್ಮಾಣಿಸಿ ಪ್ರತಿಭಟನೆ ಕೈಬಿಟ್ಟರು.
ಸಂಜೆ ಪ್ರತಿಭಟನೆಯ ಬಿಸಿ: ಸಂಜೆ 5 ಗಂಟೆಯ ಸುಮಾರಿಗೆ ಗದ್ದನಕೇರಿ ಕ್ರಾಸ್‍ಗೆ ಆಗಮಿಸಿದ ಕಬ್ಬು ಬೆಳೆಗಾರರು 6 ಗಂಟೆ ತನಕ ಕ್ರಾಸ್‍ನ 4 ಕಡೆಯ ಹೆದ್ದಾರಿಗಳನ್ನು ಬಂದ್ ಮಾಡಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ತುಳಸಿಗೇರಿಯಲ್ಲಿಯೂ ಪ್ರತಿಭಟನೆ: ಸಮೀಪದ ತುಳಸಿಗೇರಿಯಲ್ಲಿ ಮಧ್ಯಾಹ್ನ ಬಾಗಲಕೋಟೆ-ಬೆಳಗಾವಿ ಮುಖ್ಯ ರಸ್ತೆ ಬಂದ್ ಮಾಡಿದ ಕಬ್ಬು ಬೆಳೆಗಾರರು ಸಂಜೆ 6 ಗಂಟೆಯ ತನಕ ಸರ್ಕಾರದ ವಿರುದ್ಧ ಗುಡುಗಿದರು. ಇದರಿಂದ ಗದ್ದನಕೇರಿ ಕ್ರಾಸ್ ಹಾಗೂ ತುಳಸಿಗೇರಿ, ಕಲಾದಗಿ ಮತ್ತು ಲೋಕಾಪುರ ನಡುವಿನ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿ ಪ್ರಯಣಿಕರು ಪರದಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲೇ ಸಿಲುಕಿ ಪರದಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.