ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಸಕ್ಕರೆ ಕಾರ್ಖಾನೆಯು ನಷ್ಟ ತುಂಬಿಸಿಕೊಂಡು ಲಾಭದ ಕಡೆ ಹೋಗುವ ಅವಕಾಶವಿದೆ, ಕಳೆದ ವರ್ಷ 2.40 ಲಕ್ಷ ಟನ್ ಕಬ್ಬು ಅರೆದಿರುವುದು ದಾಖಲೆಯಾಗಿದ್ದು, ಈ ಬಾರಿ ಮೈಷುಗರ್ ವ್ಯಾಪ್ತಿಯಲ್ಲಿ ಉತ್ತಮವಾಗಿ 3 ಲಕ್ಷ ಟನ್ ಕಬ್ಬು ನುರಿಸಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ 2024-25ನೇ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ರೈತರಿಗೆ ಬಾಕಿ ಹಣ ಪಾವತಿ ಮಾಡಲಾಗಿದೆ. ಪ್ರಸ್ತುತದಲ್ಲಿ ಕಾರ್ಖಾನೆ ನುರಿಸುವ ಅಗತ್ಯ ಕಬ್ಬು ಸರಬರಾಜು ಆಗಲಿದೆ, ಕೋಜನ್, ಎಥೆನಾಲ್ ತಯಾರಿಸುವುದನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಖಾನೆ ಸ್ಥಾಪನೆ ಅವಶ್ಯವಿರುವುದರಿಂದ ರೈತರ ಹಿತದೃಷ್ಟಿಯಿಂದ ಅದರ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು.
ಕಳೆದ ವರ್ಷ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಷುಗರ್ ಪುನಾರಂಭ ಮತ್ತು ಸಣ್ಣಪುಟ್ಟಣ ದುರಸ್ತಿ ಕಾರ್ಯ ಸೇರಿದಂತೆ ಕಾರ್ಖಾನೆಗೆ 50 ಕೋಟಿ ರು. ಅನುದಾನ ನೀಡಿದರು. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಮುತುವರ್ಜಿಯಿಂದ ಅನುದಾನ ತರುವಲ್ಲಿ ಯಶಸ್ವಿಯಾದರು, ಅದೇರೀತಿ ಹೊಸ ಕಾರ್ಖಾನೆ ಆರಂಭಿಸಲು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.ಬರಗಾಲ ಎಲ್ಲ ಕಡೆಯೂ ಇಲ್ಲ ಹಾಗಾಗಿ ಇದು ಕಬ್ಬು ಬೆಳೆಗೆ ಯಾವ ಪರಿಣಾಮವೂ ಬೀರಿಲ್ಲ, ಮೈಷುಗರ್ ವ್ಯಾಪ್ತಿಯಲ್ಲಿ 3 ಲಕ್ಷ ಟನ್ ಕಬ್ಬು ಅರೆಯಲು ಟಾರ್ಗೆಟ್ ಹೊಂದಿದ್ದೇವೆ. ಏಕೆಂದರೆ 2007ರ ನಂತರ ಕಾರ್ಖಾನೆ ಚೆನ್ನಾಗಿ ನಡೆಯುತ್ತಿತ್ತು ಹಾಗಾಗಿ ಹೇಳುತ್ತಿದ್ದೇನೆ, ಕಾಟಾಚಾರಕ್ಕೆ ಕಬ್ಬು ನುರಿಸಲು ಚಾಲನೆ ನೀಡಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲೆಗೆ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವಧಿಯಲ್ಲಿ ನೀಡಲಾಗಿದೆ. ಅದರಂತೆ ಮೈಷುಗರ್ ಕಾರ್ಖಾನೆಯನ್ನು ಹೊಸ ಆಯಾಮದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಮುಖ್ಯಮಂತ್ರಿ ಆಸಕ್ತಿ ತೋರಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಬರ ಬರುತ್ತೆ ಅಂದಿದ್ದರು, ಆದರೆ ಆಗಸ್ಟ್, ಸೆಪ್ಟಂಬರ್‌ನಲ್ಲಿ ಬಾಗಿನ ಅರ್ಪಿಸುತ್ತಿದ್ದೆವು, ಈ ಬಾರಿ ಜುಲೈನಲ್ಲಿಯೇ ಬಾಗಿನ ನೀಡಿದ್ದೇವೆ ಎಂದರು.ಯಾವುದೇ ಅಭಿವೃದ್ಧಿ ಕೆಲಸ ಮಾಡಿದರೂ ಮೊಸರಲ್ಲಿ ಕಲ್ಲು ಹುಡುಕುವುದನ್ನು ಮಾಡಿ ಸುಳ್ಳುಗಳನ್ನೇ ಹೇಳಿಕೊಂಡು ನಮ್ಮನ್ನು ವಿರೋಧಿಸುವವರು ಬರುತ್ತಿದ್ದಾರೆ, ಎರಡನೇ ಬಾರಿ ಕಬ್ಬು ಬಾಕಿ ಹಣ ನೀಡಿ ಮೈಷುಗರ್ ಕಾರ್ಖಾನೆಯನ್ನು ಯಾವುದೇ ತೊಂದರೆ ಇಲ್ಲದೇ ಆರಂಭಿಸಿದ್ದೇವೆ, ದರ ನಿಗದಿ ಮಾಡುವುದು ಕೇಂದ್ರದ್ದು, ನಾವು ಕೂಡ ಒತ್ತಡ ಹೇರುತ್ತೇವೆ, ಈ ವರ್ಷ ಸ್ವಲ್ಪ ಕಬ್ಬಿನ ಅಭಾವವಿರಬಹುದು, 2 ರಿಂದ 3 ಲಕ್ಷ ಕಬ್ಬು ಅರೆಯುವ ಗುರಿಯಿದೆ ಎಂದರು.
ಶಾಸಕರಾದ ಪಿ.ರವಿಕುಮಾರ್, ಕೆ.ಉದಯ್, ರಮೇಶ್‌ಬಾಬು ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ.ಸಿಇಒ ಶೇಖ್ ತನ್ವಿರ್ ಆಸಿಫ್, ಮುಖಂಡರಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಗುನ್ನಾಯಕನಹಳ್ಳಿ ಮುದ್ದೇಗೌಡ, ಜಯರಾಮ್, ನಾಗೇಂದ್ರ, ಕಮಲಾ ಭಾಗವಹಿಸಿದ್ದರು.