ಮಸೀದಿಗಳಲ್ಲಿ ಆಜಾನ್ ಕೂಗುವಾಗ ಉಂಟಾಗುವ ಅತಿಯಾದ ಶಬ್ದಮಾಲಿನ್ಯವನ್ನು ನಿಯಂತ್ರಿಸಲು ಹೊಸ ತಂತ್ರಾಂಶವನ್ನು ಬಳಸುವಂತೆ ರಾಜ್ಯ ಸರ್ಕಾರ ಮಸೀದಿಗಳಿಗೆ ಸೂಚಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗ: ಮಸೀದಿಗಳಲ್ಲಿ ಆಜಾನ್ ಕೂಗುವಾಗ ಉಂಟಾಗುವ ಅತಿಯಾದ ಶಬ್ದಮಾಲಿನ್ಯವನ್ನು ನಿಯಂತ್ರಿಸಲು ಹೊಸ ತಂತ್ರಾಂಶವನ್ನು ಬಳಸುವಂತೆ ರಾಜ್ಯ ಸರ್ಕಾರ ಮಸೀದಿಗಳಿಗೆ ಸೂಚಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಪ್ರೀಂ ಕೋರ್ಟ್ ಶಬ್ದಮಾಲಿನ್ಯ ತಡೆಯಲು ಧ್ವನಿವರ್ಧಕಗಳ ಶಬ್ದದ ಮಿತಿಯನ್ನು ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್ ಎಂದು ಆದೇಶಿಸಿದೆ. ಆದರೂ, ಕೆಲವು ಮಸೀದಿಗಳಲ್ಲಿ ಈ ಮಿತಿಗಳನ್ನು ಮೀರಿ ಆಜಾನ್ ಕೂಗಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದರು.ಮಹಾರಾಷ್ಟ್ರದಲ್ಲಿ ಶಬ್ದಮಾಲಿನ್ಯದ ವಿರುದ್ಧ ನಡೆದ ಹೋರಾಟದಲ್ಲಿ 1500ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದ್ದರೂ, ಆಜಾನ್ ಶಬ್ದದಲ್ಲಿ ಇಳಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಹೊಸದಾಗಿ ಬಿಡುಗಡೆಯಾಗಿರುವ ಉಚಿತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಶಬ್ದಮಾಲಿನ್ಯವನ್ನು ತಡೆಯಬಹುದು ಎಂದು ತಿಳಿಸಿದರು.ತಮಿಳುನಾಡಿನ ಕೆಲವು ಐಟಿ ತಂತ್ರಜ್ಞರು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಅಲ್ಲಿನ ಕೆಲವು ಮಸೀದಿಗಳು ಇದನ್ನು ಯಶಸ್ವಿಯಾಗಿ ಬಳಸುತ್ತಿವೆ. ಈ ಅಪ್ಲಿಕೇಶನ್ ಬಳಸುತ್ತಿರುವ ಮಹೀಮ್ ಜುಮಾ ಮಸೀದಿಯ ಫಹಾದ್ ಖಲೀಲ್ ಪಠಾಣ್ ಅವರ ಪ್ರಕಾರ, ಆಜಾನ್ ಶುರುವಾಗುವಾಗ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿರುವವರ ಮೊಬೈಲ್‌ಗೆ ಸಂದೇಶ ಹೋಗುತ್ತದೆ. ಅದನ್ನು ತೆರೆದು ಕ್ಲಿಕ್ ಮಾಡಿದಾಗ ಅವರಿಗೆ ಮಾತ್ರ ಆಜಾನ್ ಕೇಳಿಸುತ್ತದೆ. ಇದರಿಂದ ಸುತ್ತಮುತ್ತಲಿನ ಸಮುದಾಯದ ಜನರಿಗೆ ನೇರವಾಗಿ ಆಜಾನ್ ಕೇಳಿಸುವ ಮೂಲಕ ಅತಿಯಾದ ಶಬ್ದಮಾಲಿನ್ಯ ಉಂಟಾಗುವುದಿಲ್ಲ ಮತ್ತು ಜನರಿಗೆ ತೊಂದರೆಯಾಗುವುದಿಲ್ಲ ಎಂದು ಸಲಹೆ ನೀಡಿದರು.ದೇಶದಾದ್ಯಂತ ಅನೇಕ ರಾಜ್ಯಗಳು ಈ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುತ್ತಿವೆ. ಆದರೆ ಕರ್ನಾಟಕದಲ್ಲಿ ಇದು ಇನ್ನೂ ಜಾರಿಗೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಅಪ್ಲಿಕೇಶನ್ ಬಗ್ಗೆ ಜನರಿಗೆ ಮಾಹಿತಿ ನೀಡಿ, ಅದನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಇದರಿಂದ ಮುಸ್ಲಿಂರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದರು.ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಕರ್ನಾಟಕದ ವೀರಪ್ಪಮೊಯ್ಲಿ, ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕಳಿಸಿ ಅದೇನು ಕಡಿದು ಕಟ್ಟೆ ಹಾಕುತ್ತಾರೋ ಗೊತ್ತಿಲ್ಲ. ಕಾಂತರಾಜ್ ವರದಿಯನ್ನೇ ಜಾರಿಗೆ ತರಲು ಯೋಗ್ಯತೆ ಇಲ್ಲದವರು ಹಿಂದುಳಿದ ವರ್ಗಕ್ಕೆ ಏನು ಅನುಕೂಲ ಮಾಡುತ್ತಾರೆ. ಆಕಸ್ಮಾತ್ ಪ್ರಧಾನಿ ಮೋದಿ ಅವರಿಗೆ ಚಾಲೆಂಜ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಅದಂತೂ ಇವರ ಕೈಲಿ ಸಾಧ್ಯವೇ ಇಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಕೆ.ಇ.ಕಾಂತೇಶ್, ಇ.ವಿಶ್ವಾಸ್, ನಾಗರಾಜ್, ಮೋಹನ್ ಜಾಧವ್, ಉಮೇಶ್ ಆರಾಧ್ಯ, ವಾಗೀಶ್, ರಾಜು, ಲೋಕೇಶ್, ಚನ್ನಬಸಪ್ಪ, ಶಂಕರ್, ಶಿವು, ಶ್ರೀಕಾಂತ್, ಕುಬೇರಪ್ಪ, ಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.