ಮುಖ್ಯ ಶಿಕ್ಷಕಿ ಅಮಾನತು, ಅಡುಗೆದಾರರ ಬದಲಾವಣೆಗೆ ಸಲಹೆ

KannadaprabhaNewsNetwork |  
Published : Aug 25, 2024, 01:55 AM IST
ಪೋಟೊ24ಕೆಎಸಟಿ3: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಶಾಲೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ ನೀಡಿ ಸಭೆ ನಡೆಸಿದರು.24ಕೆಎಸಟಿ3.1: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಸ್ಥರೊಂದಿಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಚರ್ಚಿಸಿದರು.24ಕೆಎಸಟಿ3.2: ಕುಷ್ಟಗಿ ತಾಲೂಕಿನ ಬಿಜಕಲ್ ಶಾಲೆಯ ಮಕ್ಕಳೊಂದಿಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಚರ್ಚಿಸಿದರು.24ಕೆಎಸಟಿ3.3: ಕುಷ್ಟಗಿ ತಾಲೂಕಿನ ಬಿಜಕಲ್ ಶಾಲೆಯ ವಿದ್ಯಾರ್ಥಿನಿಯ ಆರೋಗ್ಯವನ್ನು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ವಿಚಾರಿಸಿದರು. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನ ಬಿಜಕಲ್‌ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ಮಾಡಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿ ಅಮಾನತು ಹಾಗೂ ಅಡುಗೆದಾರರನ್ನು ಬದಲಾವಣೆ ಮಾಡುವಂತೆ ಬಿಇಒ ಅವರಿಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸಲಹೆ ನೀಡಿದ್ದಾರೆ.

ಕುಷ್ಟಗಿ: ತಾಲೂಕಿನ ಬಿಜಕಲ್‌ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟ ಮಾಡಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿ ಅಮಾನತು ಹಾಗೂ ಅಡುಗೆದಾರರನ್ನು ಬದಲಾವಣೆ ಮಾಡುವಂತೆ ಬಿಇಒ ಅವರಿಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸಲಹೆ ನೀಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಶಾಲೆಗೆ ಶನಿವಾರ ಭೇಟಿ ನೀಡಿದ ಶೇಖರಗೌಡ ರಾಮತ್ನಾಳ ಅವರು, ಅಡುಗೆ ವ್ಯವಸ್ಥೆ ಪರಿಶೀಲಿಸಿ, ಸಭೆ ನಡೆಸಿ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮುಖ್ಯ ಶಿಕ್ಷಕರು ಶಾಲೆಯಲ್ಲಿ ಅಡುಗೆ ತಯಾರು ಮಾಡಿದ ಆನಂತರ ಮೊದಲು ಊಟ ಮಾಡಿ ಗುಣಮಟ್ಟವನ್ನು ಪರೀಕ್ಷಿಸಬೇಕು. ಆದರೆ ಈ ಶಾಲೆಯ ಮುಖ್ಯ ಶಿಕ್ಷಕರು ಆ ಕೆಲಸ ಮಾಡಿಲ್ಲ. ನಿರ್ಲಕ್ಷ್ಯ ತೋರಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಬೇಕು. ಈ ಬಿಸಿಯೂಟದ ತೊಂದರೆ ರಾಜ್ಯದ ಪ್ರತಿಯೊಂದು ಶಾಲೆಯಲ್ಲಿದೆ. ಇಂತಹ ಘಟನೆಗಳು ನಡೆದಾಗ ಮಾತ್ರ ಬಯಲಿಗೆ ಬರುತ್ತಿವೆ. ಅಡುಗೆದಾರರು ಸಹಿತ ಈ ಘಟನೆಗೆ ಕಾರಣರಾಗಿದ್ದು, ಅವರನ್ನು ಸಹಿತ ಬದಲಾವಣೆ ಮಾಡಬೇಕು ಎಂದು ಅಕ್ಷರ ದಾಸೋಹ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆ: ಶೇಖರಗೌಡ ರಾಮತ್ನಾಳ ಅವರು ಶಾಲೆಯ ಶೌಚಾಲಯ, ಅಡುಗೆ ಕೋಣೆ, ಸ್ವಚ್ಛತೆ ಹಾಗೂ ಸೌಲಭ್ಯಗಳ ಬಗ್ಗೆ ವಿಚಾರಿಸಿದರು. ಗ್ರಾಮಸ್ಥರಿಂದ ಅನೇಕ ದೂರುಗಳು ಬಂದವು. ಸ್ಥಳದಲ್ಲಿಯೇ ಇದ್ದ ಪಿಡಿಒ ಆನಂದರಾವ್ ಕುಲಕರ್ಣಿ ಅವರಿಗೆ ಒಂದು ವಾರದಲ್ಲಿ ಶೌಚಾಲಯ ದುರಸ್ತಿ, ಕುಡಿಯುವ ನೀರು ಹಾಗೂ ಸ್ವಚ್ಛತೆ ಮಾಡಿಸಿಕೊಡುವ ಕೆಲಸವಾಗಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ವಿದ್ಯಾರ್ಥಿಗಳೊಂದಿಗೆ ಚರ್ಚೆ: ಶಾಲಾ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ನಡೆದ ಘಟನೆಯ ಕುರಿತು ವಿಚಾರಿಸಿದರು. ನಮಗೆ ಅಡುಗೆದಾರರು ಸರಿಯಾದ ಆಹಾರ ತಯಾರಿಸಿ ಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಊಟದಲ್ಲಿ ಹುಳುಗಳು ಇರುತ್ತವೆ. ನಾವೇನಾದರೂ ಕೇಳಿದರೆ ನಮ್ಮನ್ನು ಗದರಿಸುತ್ತಾರೆ. ಅಡುಗೆದಾರರನ್ನು ಬದಲಾವಣೆ ಮಾಡಬೇಕು. ನಮ್ಮ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಬಗೆಹರಿಸಿಕೊಡಬೇಕು ಎಂದರು.

ಅದಕ್ಕೆ ಉತ್ತರಿಸಿದ ಆಯೋಗದ ಸದಸ್ಯ, ಈಗಾಗಲೇ ಅಡುಗೆದಾರರ ಬದಲಾವಣೆಗೆ ಸೂಚಿಸಿದ್ದೇವೆ. ಮೂಲಭೂತ ಸೌಲಭ್ಯದ ಕುರಿತು ಪಿಡಿಒ ಅವರು ಒಂದು ವಾರದೊಳಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ ಎಂದರು.

ಗ್ರಾಮಸ್ಥರು ಮಾತನಾಡಿ, ನಮ್ಮ ಶಾಲೆಯಲ್ಲಿ ಮಧ್ಯವ್ಯಸನಿಗಳ ಕಾಟ ಹೆಚ್ಚಾಗಿದೆ. ಶಾಲೆಯ ಬಾಗಿಲಿಗೆ ಹಾಕಿರುವ ಬೀಗ, ಕಿಟಕಿ ಮುರಿಯುತ್ತಾರೆ. ಶಾಲಾ ಸ್ವಚ್ಛತೆ ಹಾಳು ಮಾಡುತ್ತಿದ್ದು, ಕೂಡಲೆ ನಮ್ಮ ಶಾಲೆಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ರಾಮತ್ನಾಳ ಅವರು, ಇದು ನಿಮ್ಮೂರ ಶಾಲೆಯಾಗಿದ್ದು, ನೀವು ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ಅಧಿಕಾರಿಗಳು ಎಲ್ಲವನ್ನೂ ಮಾಡುವುದಕ್ಕೆ ಆಗುವುದಿಲ್ಲ. ಸಂದರ್ಭ ಬಂದರೆ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸುತ್ತೇವೆ ಎಂದರು.

ಎರಡು ವಾರಗಳಿಗೊಮ್ಮೆ ಬೀಟ್ ಪೊಲೀಸರು ಶಾಲೆಗೆ ಬಂದು ಮುಖ್ಯ ಶಿಕ್ಷಕರಿಂದ ಸಹಿ ಮಾಡಿಸಿಕೊಂಡು ಹೋಗುವ ಕೆಲಸವಾಗಬೇಕು. ಅಂದಾಗ ಶಾಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳಬಹುದು. ಈ ಕುರಿತು ಕ್ರಮವಹಿಸಲು ಬಿಇಒ ಹಾಗೂ ಪಿಎಸ್‌ಐ ಅವರಿಗೆ ಸೂಚಿಸಿದರು.

ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಬಿಇಒ ಸುರೇಂದ್ರ ಕಾಂಬಳೆ, ಅಕ್ಷರ ದಾಸೋಹ ಜಿಲ್ಲಾಧಿಕಾರಿ ಅನಿತಾ, ಅಕ್ಷರ ದಾಸೋಹ ತಾಲೂಕಾಧಿಕಾರಿ ಶರಣಪ್ಪ, ಸಿಡಿಪಿಒ ಯಲ್ಲಮ್ಮ ಹಂಡಿ, ಪಿಎಸ್‌ಐ ಹನುಮಂತಪ್ಪ ತಳವಾರ, ಪಿಡಿಒ ಆನಂದರಾವ್ ಕುಲಕರ್ಣಿ, ಡಾ. ಸಂತೋಷಕುಮಾರ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ