ಕಿಂಡಿ ಅಣೆಕಟ್ಟೆ ಮೇಲ್ದರ್ಜೆಗೇರಿಸಲು ಸಲಹೆ

KannadaprabhaNewsNetwork | Published : Nov 4, 2024 12:34 AM

ಸಾರಾಂಶ

ಕಿಂಡೆ ಅಣೆಕಟ್ಟೆಯಲ್ಲಿ ಹಾಳಾಗಿರುವ ಹಲಗೆಗಳು ನೀರನ್ನು ತಡೆಯುವುದೇ ಇರುವುದರಿಂದ ನೀರು ಮುಂದೆ ಹರಿದು ಹೋಗುತ್ತಿವೆ, ಈಗ ಇದಕ್ಕೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಬೇಕು, ಮತ್ತು ಅಲ್ಲಿರುವ ಜಾಕ್ವೆಲ್ ಗಳಿಗೆ ನಿರಂತರವಾಗಿ ನೀರು ಹರಿದು ಬರುವಂತೆ ಮಾಡಬೇಕು ಇದರಿಂದ ನೀರಿನ ಸಮಸ್ಯೆ ನೀಗಿಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಕಿಂಡಿ ಅಣೆಕಟ್ಟನ್ನು ಮೇಲ್ದರ್ಜೆರಿಸಿದರೆ, ನೀರಿನ ಶೇಖರಣೆ ಹೆಚ್ಚಾಗಿ, ನಗರ ಮತ್ತು ಸುತ್ತಮುತ್ತಲಿನ ನೀರಿನ ಬವಣೆ ನೀಗಿಸಬಹುದು ಎಂದು ಮಾಜಿ ಶಾಸಕ ಶಿವಶಂಕರ ರೆಡ್ಡಿ ಅಭಿಪ್ರಾಯಪಟ್ಟರು.ನೇತಾಜಿ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ವೇಗವಾಗಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ನಗರದಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಲಿದೆ, ಈಗಾಗಲೇ ಅಣೆಕಟ್ಟಿಗೆ ಅಳವಡಿಸಿರುವ ಬಹಳಷ್ಟು ಹಲಗೆಗಳು ಹಾಳಾಗಿವೆ. ಈ ಹಲಗೆಗಳು ನೀರನ್ನು ತಡೆದು, ಪೋಷಕ ಕಾಲುವೆಗಳ ಮುಖಾಂತರ ಕೆರೆಗಳಿಗೆ ಹರಿಯುವಂತೆ ಮಾಡುತ್ತವೆ , ಇದರಿಂದ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದರು. ಅಣೆಕಟ್ಟಿಗೆ ಜಾಲಪ್ಪ ಹೆಸರನ್ನಿಡಲಿ

ಈಗ ಹಾಳಾಗಿರುವ ಹಲಗೆಗಳು ನೀರನ್ನು ತಡೆಯುವುದೇ ಇರುವುದರಿಂದ ನೀರು ಮುಂದೆ ಹರಿದು ಹೋಗುತ್ತಿವೆ, ಈಗ ಇದಕ್ಕೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಬೇಕು, ಮತ್ತು ಅಲ್ಲಿರುವ ಜಾಕ್ವೆಲ್ ಗಳಿಗೆ ನಿರಂತರವಾಗಿ ನೀರು ಹರಿದು ಬರುವಂತೆ ಮಾಡಬೇಕು ಇದರಿಂದ ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತದೆ, ಮತ್ತು ಈ ಕಿಂಡಿ ಅಣೆಕಟ್ಟು ಮಾಜಿ ಸಂಸದ ಜಾಲಪ್ಪನವರ ಕಾಲದಲ್ಲಿ ನಿರ್ಮಾಣ ಮಾಡಿರುವುದರಿಂದ ಅವರ ಹೆಸರನ್ನು ನಾಮಕರಣ ಮಾಡಬೇಕು. ಅಣೆಕಟ್ಟು ನಿರ್ಮಾಣಕ್ಕೆ ವಿವಿಧ ಇಲಾಖೆಗಳಿಂದ ಅನುಮತಿ ತಂದು ಅಣೆಕಟ್ಟು ನಿರ್ಮಿಸುವಲ್ಲಿ ಯಶಸ್ವಿಯಾದರು. ಅವರ ದೂರದೃಷ್ಟಿಯ ಫಲವಾಗಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ಇಂದು ತಾಲ್ಲೂಕಿನ ಆಸರೆಯಾಗಿದ್ದು, ನಗರದ ನೀರಿನ ಹಾಹಾಕಾರ ನೀಗಿಸುವ ಜತೆಗೆ ಪೋಷಕ ಕಾಲುವೆಗಳ ಮೂಲಕ ಹಲವು ಕೆರೆಗಳಿಗೆ ನೀರು ಹರಿಯುತ್ತಿದೆ.ಸ್ವಯಂಚಾಲಿತ ಗೇಟ್‌ ಅಳವಡಿಸಿ

ಕಿಂಡಿ ಅಣೆಕಟ್ಟು ನೀರಿನಿಂದ ತುಂಬಿದಾಗ ಸ್ವಯಂಚಾಲಿತ ಗೇಟ್ ಗಳು ತೆರೆದು ನೀರು ಹರಿಯುವಂತೆ ಮಾಡಿ ಕಾಲವೆಗಳಲ್ಲಿ ಸರಾಗವಾಗಿ ನೀರು ಸಾಗಲು ವ್ಯವಸ್ಥೆ ಮಾಡಬೇಕಾಗಿದೆ. ಈ ಕೆಲಸಕ್ಕಾಗಿ ನಾನು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಹಾಗೂ ನಗರದಲ್ಲಿ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆಯನ್ನು, ಬ್ರಿಡ್ಜ್ ಕಂ ಬ್ಯಾರೇಜ್ ರೀತಿ ನಿರ್ಮಾಣ ಮಾಡಿದರೆ ನೀರು ನಿಂತು ಮುಂದೆ ಸಾಗುತ್ತದೆ, ಇದರಿಂದ ನಗರಕ್ಕೆ ನೀರಿನ ಕ್ಷಾಮ ಉಂಟಾಗುವುದಿಲ್ಲ ಎಂದರು.

Share this article