ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸರ್ಕಾರದಿಂದ ಈಗಾಗಲೇ ನಿಗದಿಗೊಳಿಸಿರುವ ಯೋಜನೆಗಳಿಗೆ ಹಣ ಬರಲಿದ್ದು, ಎಲ್ಲರೂ ತಮಗೆ ನಿಗದಿಗೊಳಿಸಿರುವ ಹಣವನ್ನು ವಾರ್ಷಿಕ ಯೋಜನೆಯಲ್ಲಿ ಬಳಸಿಕೊಳ್ಳಬೇಕೆಂದು ಝೀವಲ್ ಖಾನ್ ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ಕಚೇರಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳುವುದು, ಬಯೋಮೆಟ್ರಿಕ್ ಅಳವಡಿಸಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಎಂದರು.
ಪಶುವೈದ್ಯಕೀಯ ಇಲಾಖೆಯಲ್ಲಿ ಬರುವ ಕಾಯಿಲೆಗಳಿಗೆ ಲಸಿಕೆ ಸಂಗ್ರಹ ಇದೆ. ಕಾಲುಬಾಯಿ ರೋಗಕ್ಕೆ ಈಗಾಗಲೇ ಒಂದು ಬಾರಿ ಲಸಿಕೆ ನೀಡಲಾಗಿದ್ದು, ಎರಡನೇ ಲಸಿಕೆ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಇಲಾಖೆಯ ವೈದ್ಯಾಧಿಕಾರಿ ನಾಗರಾಜು ಸಭೆಗೆ ತಿಳಿಸಿದರು.ಈ ಸಂದರ್ಭ ಹೈನುಗಾರಿಕೆ ರೈತರ ಉಪ ಕಸುಬಾಗಿದ್ದು, ಜಾನುವಾರುಗಳಿಗೆ ಯಾವುದೇ ಕಾಯಿಲೆ ಬಾರದ ಹಾಗೆ ಮುಂಜಾಗ್ರತೆ ವಹಿಸಬೇಕು. ಸಮಯಕ್ಕೆ ಸರಿಯಾಗಿ ಚುಚ್ಚುಮದ್ದುಗಳನ್ನು ನೀಡಬೇಕು. ಪಶುಗಳಿಗೆ ವಿಮೆಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಗ್ರಾಮೀಣ ಜನರಿಗೆ ಡೆಂಘೀ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಜ್ವರ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿ, ಪ್ರಾರಂಭದಲ್ಲಿಯೇ ಗುಣಪಡಿಸಲು ಇಲಾಖೆ ಮುಂದಾಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾಯಿಲೆ ಬಗ್ಗೆ ಮಾಹಿತಿ ನೀಡಬೇಕೆಂದು ಯೋಜನಾಧಿಕಾರಿ ತಿಳಿಸಿದರು.
ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಲು ಇಲಾಖೆ ಮುಂದಾಗಬೇಕು ಎಂದು ಯೋಜನಾಧಿಕಾರಿ ತಿಳಿಸಿದರು.
ಜೆಜೆಎಂ ಯೋಜನೆಯಲ್ಲಿ ತಾಲೂಕಿನಲ್ಲಿ 247 ಕುಡಿಯುವ ನೀರಿನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ 202 ಕಾಮಗಾರಿಗಳು ಮುಗಿದು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದವುಗಳನ್ನು ಡಿಸೆಂಬರ್ ತಿಂಗಳಿನೊಳಗೆ ಮುಗಿಸಲಾಗುವುದು ಎಂದು ಜಿ.ಪಂ ಅಭಿಯಂತರ ವಿರೇಂದ್ರ ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವೀರಣ್ಣ ಇದ್ದರು.