ಕನ್ನಡಪ್ರಭ ವಾರ್ತೆ ಮಡಿಕೇರಿ
ಮುಂಗಾರು ಸಂದರ್ಭ ಮಡಿಕೇರಿ ನಗರದಲ್ಲಿ ಹೆಚ್ಚಿನ ಎಚ್ಚರ ವಹಿಸುವಂತೆ ಶಾಸಕರಾದ ಡಾ.ಮಂತರ್‌ಗೌಡ ಅವರು ಸಲಹೆ ಮಾಡಿದ್ದಾರೆ.ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸಂದರ್ಭದಲ್ಲಿ ಕಾಳಜಿ ವಹಿಸಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರ ವಹಿಸಬೇಕು ಎಂದರು.
ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ರಾಜ ಕಾಲುವೆಯಲ್ಲಿ ಕಸ ಕಡ್ಡಿ ಸೇರದಂತೆ ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಸಹಾಯವಾಣಿ ಆರಂಭ ಹೀಗೆ ಮುಂಗಾರು ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ರಾಜಾಸೀಟು ಮತ್ತು ಜನರಲ್ ತಿಮ್ಮಯ್ಯ ಮುಖ್ಯರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಪಾದಚಾರಿ ದಾರಿ, ಚರಂಡಿ, ವಾಹನಗಳ ಪಾರ್ಕಿಂಗ್ ಹೀಗೆ ಎಲ್ಲವನ್ನೂ ಒಳಗೊಂಡ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದೆ ಎಂದು ಶಾಸಕರು ತಿಳಿಸಿದರು.
ಫಾರ್ಮ್ ನಂ.3 ನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಶಾಸಕರು ಸೂಚಿಸಿದರು. ನಗರಸಭೆ ಕೆಲಸಗಳ ಸಂಬಂಧ ಪಟ್ಟಿ ಮಾಡಿ ನಾಮಫಲಕದಲ್ಲಿ ಅಳವಡಿಸುವಂತೆ ಶಾಸಕರು ಸಲಹೆ ನೀಡಿದರು.ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.
ಸದಸ್ಯರಾದ ರಾಜೇಶ್ ಯಲ್ಲಪ್ಪ, ಬಿ.ಪಿ.ಚಿತ್ರಾವತಿ, ಸತೀಶ್, ಸವಿತಾ ರಾಕೇಶ್ ಬಶೀರ್ ಅಹ್ಮದ್, ಪಿ.ಚಂದ್ರಶೇಖರ್, ಕೆ.ಎಂ.ಅಪ್ಪಣ್ಣ, ಸಬಿತಾ, ಮೇರಿ ವೇಗಸ್, ಕೆ.ಎಸ್.ರಮೇಶ್, ಮುಸ್ತಾಪ ಎಂ.ಎ., ಮಂಜುಳಾ ಸಿ.ಕೆ, ಅರುಣ್ ಶೆಟ್ಟಿ, ಅನಿತಾ ಎನ್.ಪಿ,, ಎಂ.ಕೆ.ಮನ್ಸೂರ್ ಅಲಿ, ನೀಮಾ ಆರ್ಶದ್, ಶ್ವೇತಾ ವೈ.ಡಿ., ನಾಮ ನಿರ್ದೇಶಿತ ಸದಸ್ಯರಾದ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಜುಲೈಕಾಬಿ, ಮುದ್ದುರಾಜ್ ಬಿ.ಎನ್. ಇತರರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.