ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಸರ್ಕಾರಿ ಗೃಹವಿಜ್ಞಾನ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆ ಜಾಗೃತಿ ದಿನ ಉದ್ಘಾಟಿಸಿ ಮಾತನಾಡಿದರು. ಆತ್ಮಹತ್ಯೆಗೆ ಅತಿಯಾದ ನಿರೀಕ್ಷೆ, ಕೀಳರಿಮೆಗಳು ಕಾರಣವಾಗುತ್ತಿವೆ, ಆದ್ದರಿಂದ ಮನಸ್ಸನ್ನು ಸದೃಢವಾಗಿ ಇಟ್ಟುಕೊಳ್ಳಲು ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಯೋಗಾಸನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪದೇ ಪದೇ ಆತ್ಮಹತ್ಯೆಯ ಯೋಚನೆ ಬರುತ್ತಿದ್ದರೆ ಮನೋವೈದ್ಯರಲ್ಲಿ ಚರ್ಚಿಸಿ, ಸೂಕ್ತ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆಯ ಭಾನುಶ್ರೀ ಮಾತನಾಡಿ, ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಔಷಧಿ, ಮಾತ್ರೆ ತೆಗೆದುಕೊಂಡು ಗುಣಪಡಿಸಿಕೊಳ್ಳುತ್ತಾರೆ. ಕೀಳರಿಮೆ ಮತ್ತು ನಿರುತ್ಸಾಹ, ನಕಾರಾತ್ಮಕ ಯೋಚನೆಗಳು ಮಾನಸಿಕ ಅನಾರೋಗ್ಯ ಎಂದು ಗುರುತಿಸುತ್ತಿಲ್ಲ. ಮಾನಸಿನ ಕಾಯಿಲೆಗಳಿಗೂ ಚಿಕಿತ್ಸೆ ಇದ್ದು ಚಿಕಿತ್ಸೆ ಪಡೆದುಕೊಂಡರೆ ಆತ್ಮಹತ್ಯೆಯ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಭಾರತದಲ್ಲಿ ಪ್ರತಿ ನಿತ್ಯ 1 ಲಕ್ಷ ಜನರಲ್ಲಿ 14.2 ರಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 13 ವರ್ಷದ ಮಕ್ಕಳೂ ಮೊಬೈಲ್ ನೋಡಲು ಬಿಡಲಿಲ್ಲ, ನಿರೀಕ್ಷಿತ ಅಂಕ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿರಿಯರು ಸಾಲಭಾದೆ, ಪ್ರೀತಿ, ಪ್ರೇಮ ಪ್ರಕರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಇಂತಹ ಘಟನೆಗಳು ನಡೆಯದಂತೆ ತಡೆಯಲು ಪ್ರತಿಯೊಬ್ಬರೂ ಚಿಂತಿಸಬೇಕಿದೆ ಎಂದರು.
ಯೋಗ ಶಿಕ್ಷಕ ಗಣೇಶ್ ಬಾಬು, ಪ್ರಭಾರ ಪ್ರಾಂಶುಪಾಲ ಅಶೋಕ್, ಇತರರು ಮಾತನಾಡಿದರು. ಯೋಗ, ಮಾನಸಿಕ ಆರೋಗ್ಯ, ಸರ್ಟಿಫಿಕೇಟ್ ಕೋರ್ಸ್ ವಿವರ ಹಾಗೂ ಸೈಕಾಲಜಿ ಸೊಸೈಟಿ ವಿಭಾಗವನ್ನು ಗಣ್ಯರು ಉದ್ಘಾಟಿಸಿದರು. ಈ ವಿಭಾಗದ ಉಪಾಧ್ಯಕ್ಷೆ ರಕ್ಷಿತಾ ತಮ್ಮ ತಂಡದ ವಿವರ ನೀಡಿದರು. ಮಾನಸಿಕ ಆರೋಗ್ಯ ತಡೆ ಜಾಗೃತಿಗೆ ರೀಲ್ಸ್ ಮಾಡಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು. ಅಪೂರ್ವ, ಲಕ್ಷ್ಮೀದೇವಿ ಕಾರ್ಯಕ್ರಮ ನಿರೂಪಿಸಿದರು. ಅಮೂಲ್ಯ ವಂದಿಸಿದರು.