ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಡಿ.12 ಮತ್ತು 13ರಂದು ನಡೆಯುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಜನಾದ್ರಿಗೆ ಬರುವ ಮಾಲಾಧಾರಿಗಳು ಮತ್ತು ಭಕ್ತರಿಗೆ ಮಾರ್ಗ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ರಾಮ ಅರಸಿದ್ದಿ ತಿಳಿಸಿದರು.ಸೋಮವಾರ ನಗರದ ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾಲೆ ವಿಸರ್ಜನೆಗೆ ಅಂದಾಜು 1 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಡಿ.12ರಂದು ಗಂಗಾವತಿ ನಗರದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 8 ರಿಂದ 10 ಸಾವಿರ ಜನ ಭಾಗವಹಿಸುತ್ತಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಹೀಗಾಗಿ ಅಂಜನಾದ್ರಿ ಮತ್ತು ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಹೆಚ್ಚುವರಿ ಎಸ್‌ಪಿ, 10 ಜನ ಡಿವೈಎಸ್‌ಪಿ, 30 ಪಿಎಸ್‌ಐ 1200 ಪೊಲೀಸ್ ಸಿಬ್ಬಂದಿ, 5 ಕೆಎಸ್‌ಆರ್‌ಪಿ ತುಕುಡಿ, 10 ಡಿಆರ್ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 100 ಮತ್ತು ಅಂಜನಾದ್ರಿ ಮಾರ್ಗದಲ್ಲಿ 75ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಅಂಜನಾದ್ರಿ ಸುತ್ತ 22 ಪಾರ್ಕಿಂಗ್ ಸ್ಥಳ ನಿಗದಿಪಡಿಸಿ ಮಾಹಿತಿ ಫಲಕ ಹಾಕಲಾಗುವುದು. ನಗರ ಪ್ರದೇಶಕ್ಕೆ ಪ್ರವೇಶ ಮಾಡುವಲ್ಲಿ 11 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 9 ಚೆಕ್ಕಪೋಸ್ಟ್ ಮಾಡಿ ಅಲ್ಲಿ ಸಿಸಿ ಕ್ಯಾಮೆರಾ ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಗಂಗಾವತಿ ನಗರದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಗೆ ಬರುವವರು ಹೆಸರು ಸಮೇತ ಪಟ್ಟಿ ನೀಡುವಂತೆ ಆಯೋಜಕರಿಗೆ ಸೂಚನೆ ನೀಡಲಾಗಿದೆ. ಅಂಜನಾದ್ರಿಗೆ ಬರುವ ಮಾರ್ಗ ನಿಗದಿಪಡಿಸಿದ್ದು, ಕುಷ್ಟಗಿ, ಕೊಪ್ಪಳ ಮಾರ್ಗದಿಂದ ಬರುವವರು ನೇರವಾಗಿ ಹೊಸಪೇಟೆ, ಕಮಲಾಪುರದಿಂದ ಕಡೆಬಾಗಿಲು ಮಾರ್ಗವಾಗಿ ಬರಬೇಕು. ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಸಿರಗುಪ್ಪ ಕಡೆಯಿಂದ ಬರುವವರು ನೇರವಾಗಿ ಕಡೆಬಾಗಿಲು ಮಾರ್ಗದಿಂದ ಅಂಜನಾದ್ರಿಗೆ ಮತ್ತು ಸಿಂಧನೂರು, ಲಿಂಗಸಗೂರ, ತಾವರಗೆರೆ ಮಾರ್ಗದಿಂದ ಬರುವವರು ಗಂಗಾವತಿ ನಗರದ ರಾಣಾ ಪ್ರತಾಪ್‌ಸಿಂಹ್ ವೃತ್ತದಿಂದ ಬೈಪಾಸ್ ರಸ್ತೆ ಮೂಲಕ ಬಸ್ ನಿಲ್ದಾಣದ ಮುಂದಿನ ಆನೆಗೊಂದಿ ರಸ್ತೆಯಿಂದ ಅಂಜನಾದ್ರಿಗೆ ತೆರಳುವಂತೆ ಸೂಚನೆ ನೀಡಲಾಗುತ್ತಿದೆ. ಹಿಟ್ನಾಳ್ ಮತ್ತು ಅಗಳಕೇರಾ ಮಾರ್ಗದಲ್ಲಿ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಅಲ್ಲಿನ ಮಾರ್ಗಕ್ಕೆ ಯಾರಿಗೂ ಪ್ರವೇಶ ನೀಡುತ್ತಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.
ಈ ಸಂದರ್ಭ ಡಿವೈಎಸ್‌ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್, ನಗರ ಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಠಾಣೆ ಪಿಐ ಸೋಮಶೇಖರ ಜುಟ್ಟಲ್ ಇದ್ದರು.