ವೀಳ್ಯದೆಲೆ ಬೆಳೆಯಲು ಜಿಲ್ಲೆಯಲ್ಲಿ ಸೂಕ್ತ ವಾತಾವರಣ: ಡಾ.ವಿಷ್ಣುವರ್ಧನ

KannadaprabhaNewsNetwork | Published : Nov 29, 2024 1:00 AM

ಸಾರಾಂಶ

ವೀಳ್ಯದೆಲೆಯನ್ನು ಕೇವಲ ಧಾರ್ಮಿಕ ಕಾರ್ಯಕ್ರಮ ಹಾಗೂ ತಾಂಬುಲಕ್ಕಾಗಿ ಉಪಯೋಗಿಸಲಾಗುತ್ತಿದ್ದು, ಇತ್ತೀಚೆಗೆ ಸಾಂಕ್ರಾಮಿಕ ರೋಗಗಳಿಗೆ ಉಪಯುಕ್ತ ಔಷಧಿ ತಯಾರಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆಯಲು ಸೂಕ್ತ ವಾತಾವರಣವಿದೆ. ಲಾಭದಾಯಕ ಬೆಳೆಯಾದ ವಿಳ್ಯೆದೆಲೆ ಬೆಳೆಯಲು ರೈತರು ಮುಂದಾಗಬೇಕು ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋವಿವಿ ರೈತ ವಿಕಾಸ ಭವನದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರ ವಿಸ್ತರಣಾ ನಿರ್ದೇಶನಾಲಯ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವೀಳ್ಯದೆಲೆ ಆಧುನಿಕ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊದಲಿಗೆ ವೀಳ್ಯದೆಲೆಯನ್ನು ಕೇವಲ ಧಾರ್ಮಿಕ ಕಾರ್ಯಕ್ರಮ ಹಾಗೂ ತಾಂಬುಲಕ್ಕಾಗಿ ಉಪಯೋಗಿಸಲಾಗುತ್ತಿದ್ದು, ಇತ್ತೀಚೆಗೆ ಸಾಂಕ್ರಾಮಿಕ ರೋಗಗಳಿಗೆ ಉಪಯುಕ್ತ ಔಷಧಿ ತಯಾರಿಸಲಾಗುತ್ತಿದೆ ಎಂದರು.

ವೀಳ್ಯದೆಲೆ ಬೆಳೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಪೂರಕ ವಾತಾವರಣ ಇದೆ. ಇಲ್ಲಿ ಅಂಬಾಡಿ, ಕರಿ ಎಲೆ ಹಾಗೂ ಬನಾರಸ ಎಲೆಗಳನ್ನು ಕೂಡಾ ಬೆಳೆಯಲಾಗುತ್ತಿದೆ. ಈಗಾಗಲೇ ಬಾದಾಮಿಯ ಚೊಳಚಗುಡ್ಡ, ನೀರಬೂದಿಹಾಳ ಗ್ರಾಮಗಳಲ್ಲಿ ಬೆಳೆಯಲಾಗುತ್ತಿದೆ. ಕೇವಲ ಎಲೆಬಳ್ಳಿ ಬೆಳೆಯುವದರ ಜೊತೆಗೆ ಪಾಲಿಹೌಸ್‌ನಂತ ವಿನೂತನ ಕೃಷಿ ಜೊತೆಗೆ ಮೊಬೈಲ್ ಬಳಕೆಯಲ್ಲಿ ಗುಂಪು ರಚಿಸಿಕೊಂಡು ಉಪಯುಕ್ತ ಮಾಹಿತಿ ಪಡೆಯಲು ಮುಂದಾಗಬೇಕು ಎಂದರು.

ತೋಟಗಾರಿಕೆ ವಿವಿಯು ವಿವಿಧ ಬೆಳೆಗಳಿಗೆ ರೋಗ ತಗುಲಿದಾಗ ಸಂಬಂಧಪಟ್ಟ ರೈತರ ಜಮೀನಿಗೆ ಬಂದು ವೀಕ್ಷಿಸಿ ಪರಿಹಾರ ತಿಳಿಸುವುದಲ್ಲದೇ ಉಪಯುಕ್ತ ಮಾಹಿತಿ ಕೊಡಲಾಗುತ್ತಿದೆ. ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಬರದೇ ದಲ್ಲಾಳಿಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಸ್ವತಃ ರೈತರೇ ಸಂಘಟನೆಗೊಂಡು ರೈತ ಉತ್ಪಾದಕ ಸಂಘ ಪ್ರಾರಂಭಿಸಿ ವಿಳ್ಯೆದೆಳೆ, ಹಣ್ಣು ಬೆಳೆಗಳಾರರ ಸಂಘ ಹೀಗೆ ತಮ್ಮಲ್ಲಿ ಬೆಳೆಯುವ ಬೆಳೆಗಳ ಸಂಘ ಸ್ಥಾಪಿಸಿದಲ್ಲಿ ವ್ಯಾಪಾರಿಗಳೇ ನೇರವಾಗಿ ಬಂದು ತಮ್ಮ ಉತ್ಪನ ಖರೀದಿಸಲು ಮುಂದಾಗುತ್ತಾರೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ತೋವಿವಿಯ ಹಾಗೂ ತೋಟಗಾರಿಕೆ ಇಲಾಖೆ ಒಂದೇ ನಾಣ್ಯದ ಎರಡು ಮುಖ. ವಿವಿಯು ತರಬೇತಿ ನೀಡಿ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಮಾಹಿತಿ ನೀಡಿದರೆ, ಅದಕ್ಕೆ ಸಂಬಂಧಿಸಿದ ರಿಯಾಯಿತಿ ದರದಲ್ಲಿ ಪಾಲಿಹೌಸ್ ಸೇರಿದಂತೆ ಮುಂತಾದ ಕೃಷಿಯೇತರ ಚಟುವಟಿಕೆಗಳಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ಈ ಕಾರ್ಯ ವರ್ಷದಲ್ಲಿ ಕೆಲವೇ ರೈತರಿಗೆ ನೀಡಲಾಗುತ್ತಿದೆ. ಹಂತ ಹಂತವಾಗಿ ವೀಳ್ಯದೆಲೆ ಬೆಳೆಯಲು ಮುಂದಾದ ರೈತರಿಗೆ ನೀಡಲಾಗುತ್ತದೆ ಎಂದರು.

ಬೆಳಗಾವಿಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದಾಗ ಶಿರಗಾಂ, ಗಿರಿಗಾಂ ಗ್ರಾಮಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿತ್ತು. ಅಲ್ಲಿಯ ರೈತರಿಗೆ ಮಾಹಿತಿ ನೀಡಿ ತಿಳುವಳಿಕೆ ಮೂಡಿಸಿದಾಗ ಅಲ್ಲಿ 70 ಪಾಲಿಹೌಸ್ ಕಾಣಬಹುದಾಗಿದೆ. 20 ಗುಂಟೆ ಜಮೀನಿನಲ್ಲಿ 9 ಲಕ್ಷ ರು. ಆದಾಯ ಗಳಿಸಿ ದಾಖಲೆ ನಿರ್ಮಿಸಿದ್ದಾನೆ. ಈ ಜಿಲ್ಲೆಯಲ್ಲೂ ಕೂಡಾ ರಾಷ್ಟ್ರೀಯ ವಿಕಾಸ ಯೋಜನೆಯಡಿಯಲ್ಲಿ ವಿಳ್ಯೆದೆಲೆ ಪಾರಂಪರಿಕವಾಗಿ ಬೆಳೆಯುತ್ತಿರುವ ಚೊಳಚಗುಡ್ಡ, ಮುತ್ತಲಗೇರಿ ಮುಂತಾದ ಗ್ರಾಮಗಳಲ್ಲಿ ವಿಳ್ಯೆದೆಲೆ ಬೆಳೆಯುವ ರೈತರಿಗೆ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತರರಾದ ಮಹಾರುದ್ರಯ್ಯ ಮೋತಿ, ರಾಜೇಸಾಬ ಮೊಕಾಶಿ, ಮಾರುತಿ ಡೊಳ್ಳಿನ ಸಾಯವಯ ಕೀಟ ನಾಶಕ, ಮಾರುಕಟ್ಟೆ, ತಂತ್ರಜ್ಞಾನ ಹಾಗೂ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲು ಕೋರಿದರು. ಕೀಟಶಾಸ್ತ್ರ ಕುರಿತು ಸತ್ಯನಾರಾಯಣ, ಮಂಜುನಾಥ ಹುಬ್ಬಳ್ಳಿ ರೋಗಶಾಸ್ತ್ರ, ಭುವನೇಶ್ವರಿ ಗಾಣಿಗೇರ ಮೌಲ್ಯ ವರ್ಧನ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಚೊಳಚಗುಡ್ಡ, ನೀರಬೂದಿಹಾಳ, ಮಮಟಗೇರಿ, ಹೊನ್ನಾಕಟ್ಟಿ ಗ್ರಾಮದ ರೈತರು ಪಾಲ್ಗೊಂಡಿದ್ದರು.

ತೋವಿವಿ ಯಲ್ಲಿ ರೈತರ ಆರ್ಥಿಕ ಪ್ರಗತಿಗಾಗಿ ಈರುಳ್ಳಿ ಬೆಳೆಗಾರರ ಸಂಘ, ಮೆನಸಿಣಕಾಯಿ ಬೆಳೆಗಾರರ ಸಂಘ, ವೀಳ್ಯದೆಲೆ ಬೆಳೆಗಾರರ ಸಂಘ ಸ್ಥಾಪಿಸಲಾಗಿದೆ. ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ. ಅದರಂತೆ ದ್ರಾಕ್ಷಿ ಬೆಳೆಗಾರರ ಸಂಘವನ್ನು ರಚಿಸಿ ಕಾಲಕಾಲಕ್ಕೆ ತರಬೇತಿ ಹಾಗೂ ಸೂಕ್ತ ಮಾರುಕಟ್ಟೆ ಮಾಹಿತಿ ನೀಡಲಾಗುತ್ತದೆ. ರೈತರ ಅಭಿಲಾಷೆ ಮೇರೆಗೆ ತರಬೇತಿ ನೀಡಲಾಗುತ್ತಿದೆ.

ವಸಂತ ಗಾಣಿಗೇರ, ಮುಖ್ಯಸ್ಥರು, ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರ

Share this article