ಕನ್ನಡ ಸಾರಸ್ವತ ಲೋಕದಲ್ಲಿ ಸಹೃದಯತೆ ಹೊಂದಿದ್ದ ಸುಜನಾ: ಡಾ.ಹಂ.ಪ.ನಾಗರಾಜಯ್ಯ

KannadaprabhaNewsNetwork |  
Published : Apr 30, 2026, 01:45 AM IST
29ಕೆಎಂಎನ್ ಡಿ22 | Kannada Prabha

ಸಾರಾಂಶ

ಮೈಸೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡಿದ ದಿನದಿಂದಲೂ ಸುಜನಾ ಮತ್ತು ನಾನು ಆತ್ಮೀಯ ಗೆಳೆಯರು. ಅವರದು ಅಂತರ್ಮುಖ ವ್ಯಕ್ತಿತ್ವ, ಭಾವನಾ ಜೀವಿ, ಅಂದುಕೊಂಡಿದ್ದನ್ನು ಸಾಧಿಸಬೇಕೆಂಬ ಮನೋ ಭೂಮಿಕೆಯವರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಉಳ್ಳವರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡ ಸಾರಸ್ವತ ಲೋಕದಲ್ಲಿ ಸಹೃದಯತೆ, ಅಂತಕರಣ ಮತ್ತು ಮಾನವೀಯ ನೆಲೆಗಟ್ಟಿನ ಸಾಹಿತ್ಯ ಸೃಷ್ಟಿಯ ಮೂಲಕ ಗಮನ ಸೆಳೆದ ಕೆಲವೇ ಪ್ರಮುಖ ಸಾಹಿತಿಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಸುಜನಾ ಪ್ರಮುಖರು ಎಂದು ಖ್ಯಾತ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅಭಿಪ್ರಾಯಪಟ್ಟರು.

ತಾಲೂಕಿನ ಹೊಸಹೊಳಲು ಗ್ರಾಮದ ಎಸ್.ಎಲ್.ಎನ್ ಸುಮುದಾಯ ಭವನದ ಆವರಣದಲ್ಲಿ ಪ್ರೊ.ಸುಜನಾ ಪ್ರತಿಷ್ಠಾನ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ಸುಜನಾ ಸಾಹಿತ್ಯ ಪ್ರಶಸ್ತಿಯನ್ನು ನಾಡಿನ ಪ್ರಸಿದ್ಧ ಸಾಹಿತಿ ಪ್ರೊ.ರಾಮೇಗೌಡ(ರಾಗೌ)ರಿಗೆ ಪ್ರದಾನ ಮಾಡಿ ಮಾತನಾಡಿದರು.

ಮೈಸೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡಿದ ದಿನದಿಂದಲೂ ಸುಜನಾ ಮತ್ತು ನಾನು ಆತ್ಮೀಯ ಗೆಳೆಯರು. ಅವರದು ಅಂತರ್ಮುಖ ವ್ಯಕ್ತಿತ್ವ, ಭಾವನಾ ಜೀವಿ, ಅಂದುಕೊಂಡಿದ್ದನ್ನು ಸಾಧಿಸಬೇಕೆಂಬ ಮನೋ ಭೂಮಿಕೆಯವರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಉಳ್ಳವರು ಎಂದರು.

ಕನ್ನಡ ಸಾಹಿತ್ಯದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಅವರ ಮಾನವೀಯತೆಯ ಅಂತಕರಣ ನನ್ನನ್ನು ಹಲವು ಬಾರಿ ವಿಸ್ಮಯಗೊಳಿಸಿದೆ. ಬಹುಶಃ ಅದೇ ಅವರನ್ನು ಯುಗಸಂದ್ಯಾದಂತಹ ಯುದ್ದೋತ್ತರ ಮಹಾಭಾರತ ಕುರಿತ ಮಹಾಕಾವ್ಯ ಬರೆಯಲು ಪ್ರೇರಣೆ ನೀಡಿರಬಹುದು. ತಮ್ಮ ಗುರು ಕುವೆಂಪು ರೀತಿಯಲಿ ಕೀರ್ತಿ ಶನಿಯನ್ನು ಹೊರಗಟ್ಟಿದವರು ಪ್ರೊ.ಸುಜನಾ ಎಂದು ಬಣ್ಣಿಸಿದರು.

ನಾನು ಸುಜನಾರನ್ನು ಹತ್ತಿರದಿಂದ ಹೇಗೆ ಬಲ್ಲೆನೋ ಅದೇ ರೀತಿ ಪ್ರೊ.ರಾಗೌ ಅವರನ್ನು ಬಲ್ಲೆ. ಅವರ ಸಾಹಿತ್ಯ ಕೃಷಿಯನ್ನು ಬಲ್ಲೆ. ಸುಜನಾ ಹೆಸರಿನಲ್ಲಿ ಹಿರಿಯ ಸಾಹಿತಿಗೆ ಪ್ರಶಸ್ತಿ ಕೊಡುವ ನಿರ್ಧಾರ ಸರಿಯಾಗಿದೆ. ಈ ಚೊಚ್ಚಲ ಪ್ರಶಸ್ತಿಯು ಸುಜನಾರ ಶಿಷ್ಯ ರಾಗೌ ಅವರಿಗೆ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಾಹಿತಿ ಪ್ರೊ.ರಾಗೌ ಮಾತನಾಡಿ, ಸುಜನಾ ಅವರು ನನ್ನ ಗುರುಗಳೆಂಬುದೇ ಒಂದು ರೋಮಾಂಚನ ವಿಚಾರ. ಭಾವನಾ ಜೀವಿಗಳಾಗಿದ್ದ ಅವರು ಪ್ರಕೃತಿಯೊಂದಿಗೆ ಲೀನರಾಗುವ ಗುಣವಳ್ಳವರು. ತಮ್ಮ ಸರಳತೆ ಮತ್ತು ಸೃಜನಶೀಲತೆಯಿಂದ ಅತಿರಥ ಮಹಾರಥ ಸಾಹಿತಿಗಳಿಗೆ ಹತ್ತಿರವಾಗಿದ್ದವರು. ಸುಜನಾರ ಸಮಗ್ರ ಸಾಹಿತ್ಯವನ್ನು ಪುನರ್ ಮುದ್ರಣ ಮಾಡುವ ಕೆಲಸ ನಡೆಸಬೇಕೆಂದು ಮನವಿ ಮಾಡಿದರು.

ಸಮಾರಂಭವನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಉದ್ಘಾಟಿಸಿದರು. ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆ ವಹಿಸಿದ್ದರು. ಮರೆಯಲಾಗದ ಸುಜನತ್ವ ಕೃತಿಯನ್ನು ತುರುವೆಕೆರೆ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಬಿಡುಗಡೆ ಮಾಡಿ ಮಾತನಾಡಿದರು. ಕೃತಿ ಕುರಿತು ಪ್ರೊ:ಮೈಸೂರು ಕೃಷ್ಣ ಮೂರ್ತಿ ಮಾತನಾಡಿದರು. ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ರಾಗೌ ಕುರಿತು ಅಭಿನಂದನಾ ನುಡಿಗಳನ್ನಾಡಿದರು.

ಸಮಾರಂಭದಲ್ಲಿ ಸುಜನ ಪ್ರತಿಷ್ಠನದ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ನರಸಿಂಹಮೂರ್ತಿ, ಪ್ರೊ.ಜಿ.ಟಿ.ವೀರಪ್ಪ, ಆರ್‌ಟಿಒ ಮಲ್ಲಿಕಾರ್ಜುನ್, ಶಿ.ಕುಮಾರಸ್ವಾಮಿ, ಹೊಸಹೊಳಲು ಸೊಸೈಟಿ ಅಧ್ಯಕ್ಷ ಎಚ್,ಕೆ.ಅಶೋಕ್, ಕೆ.ಕಾಳೇಗೌಡ, ಬಲ್ಲೇನಹಳ್ಳಿ ಮಂಜುನಾಥ್,ಕತ್ತರಘಟ್ಟ ವಾಸು, ಪೂರ್ಣ ಚಂದ್ರತೇಜಸ್ವಿ, ಚಾ.ಶಿ.ಜಯಕುಮಾರ್, ವಜ್ರಪ್ರಸಾದ್, ಸುಕನ್ಯಾ, ರಂಗನಾಥ್, ಕೆ.ಜೆ.ನಾರಾಯಣ, ಕೆ.ಆರ್.ನೀಲಕಂಠ, ಪದ್ಮೇಶ್, ಶಿವಕುಮಾರ್ ಸೇರಿದಂತೆ ಸುಜನಾ ಪ್ರತಿಷ್ಠಾನದ ಎಲ್ಲಾ ಪದಾದಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಒಪ್ಪಿಗೆ ಪಡೆಯದೇ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದಕ್ಕೆ ವಿರೋಧ
ಮಳೆಗೂ ಮುನ್ನ ಪ್ರತಿ ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥ ಮಾಡಿ: ಶಾಸಕ ಬಿ.ವೈ.ವಿಜಯೇಂದ್ರ