ಸಂಗೀತ ಕ್ಷೇತ್ರಕ್ಕೆ ಸುಲಭಾ ಅಮೋಘ ಕೊಡುಗೆ

KannadaprabhaNewsNetwork | Published : Jun 9, 2024 1:42 AM

ಸಾರಾಂಶ

ನಾಡು ಕಂಡ ಅಪರೂಪದ ಸಂಗೀತಗಾರರಾಗಿದ್ದ ಡಾ. ಸುಲಭಾ ದತ್ತ ನೀರಲಗಿ ಅವರ ಹಾಡುಗಳನ್ನು ಕೇಳುವುದೇ ಒಂದು ರೀತಿಯ ಸಡಗರ, ಸಂಭ್ರಮ.

ಧಾರವಾಡ:

ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಶ್ರೇಯಸ್ಸು ಡಾ. ಸುಲಭಾ ದತ್ತ ನೀರಲಗಿ ಅವರಿಗೆ ಸಲ್ಲುತ್ತದೆ. ಗಂಗೂಬಾಯಿ ಹಾನಗಲ್ ಅವರ ಸಾಲಿನಲ್ಲಿ ನಿಲ್ಲಬಲ್ಲ ಸಾಮರ್ಥ್ಯ ಸುಲಭಾ ಅವರು ಹೊಂದಿದ್ದರು ಎಂದು ಪ್ರೊ. ಡಾ. ಲತಾ ನಾಡಗೇರ (ಪರಾಂಡೆ) ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಡಾ. ಸುಲಭಾ ದತ್ತ ನೀರಲಗಿ ದತ್ತಿ ನಿಮಿತ್ತ ಆಯೋಜಿಸಿದ್ದ ಸಂಗೀತ ಸಂಜೆ ಹಾಗೂ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿದ ಅವರು, ಸಂಗೀತದ ಬಗ್ಗೆ ಅವರಿಗೆ ಇದ್ದ ಶ್ರದ್ಧೆ ಎಲ್ಲರಿಗೂ ಮಾದರಿಯಾಗಿತ್ತು. ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುವಾಗ ಬೇಸರವಿಲ್ಲದೆ ಆಸಕ್ತಿಯಿಂದ ಹೇಳಿಕೊಡುತ್ತಿದ್ದರು. ಈಗಿನ ಸಂಗೀತ ಶಿಕ್ಷಕರು ಅವರಿಂದ ಸಾಕಷ್ಟು ಕಲಿಯಬೇಕು ಎಂದರು.

ಇನ್ನೋರ್ವ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಗದಗದ ಪಂ. ಪುಟ್ಟರಾಜ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ, ನಾಡು ಕಂಡ ಅಪರೂಪದ ಸಂಗೀತಗಾರರಾಗಿದ್ದ ಡಾ. ಸುಲಭಾ ದತ್ತ ನೀರಲಗಿ ಅವರ ಹಾಡುಗಳನ್ನು ಕೇಳುವುದೇ ಒಂದು ರೀತಿಯ ಸಡಗರ, ಸಂಭ್ರಮವಾಗಿತ್ತು. ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿ, ಪ್ರಶಸ್ತಿ ನೀಡಿದ್ದು ಸಂತೋಷವನ್ನುಂಟು ಮಾಡಿದೆ ಎಂದರು.

ಪ್ರಾರಂಭದಲ್ಲಿ ಗದಗದ ಪಂ. ಪುಟ್ಟರಾಜ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಮಿತ್ರಾ ಕಾಡದೇವರಮಠ ಸಂಗೀತ ಕಾರ್ಯಕ್ರಮ ನೀಡಿದರು. ತಬಲಾ ಸಾಥ್ ಅಲ್ಲಮಪ್ರಭು ಕಡಕೋಳ, ಹಾರ್ಮೋನಿಯಂ ಸಾಥ್ ಡಾ. ಪರಶುರಾಮ ಕಟ್ಟಿಸಂಗಾವಿ ನೀಡಿದರು. ವೇದಿಕೆ ಮೇಲೆ ದತ್ತಿ ದಾನಿ ದತ್ತ ನೀರಲಗಿ ಇದ್ದರು. ಅನುಶ್ರೀ ಎಂ. ವಾಳ್ವೆಕರ ಪ್ರಾರ್ಥಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೇಮಠ ಪರಿಚಯಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.

Share this article