ಸುಳ್ಯ ಶಾಲೇಲಿ 3 ದಶಕದಿಂದಲೇ ಲಾಸ್ಟ್‌ ಬೆಂಚಿಲ್ಲ!

KannadaprabhaNewsNetwork |  
Published : Jul 21, 2025, 01:30 AM ISTUpdated : Jul 21, 2025, 06:32 AM IST
ಲಾಸ್ಟ್‌ ಬೆಂಚ್‌ | Kannada Prabha

ಸಾರಾಂಶ

ತರಗತಿಗಳಲ್ಲಿ ‘ಲಾಸ್ಟ್ ಬೆಂಚ್’ ವ್ಯವಸ್ಥೆ ನಿವಾರಿಸಿ ವೃತ್ತಾಕಾರದ ಬೆಂಚ್ ವ್ಯವಸ್ಥೆ ಕಳೆದ ಮೂರು ದಶಕದಿಂದ  ಜಾರಿಯಲ್ಲಿರುವ ಶಾಲೆಯೊಂದು ರಾಜ್ಯದಲ್ಲಿರುವುದು ಗಮನಕ್ಕೆ ಬಂದಿದೆ.

 ದುರ್ಗಾಕುಮಾರ್ ನಾಯರ್‌ಕೆರೆ

 ಸುಳ್ಯ :  ತರಗತಿಗಳಲ್ಲಿ ‘ಲಾಸ್ಟ್ ಬೆಂಚ್’ ವ್ಯವಸ್ಥೆ ನಿವಾರಿಸಿ ವೃತ್ತಾಕಾರದ ಬೆಂಚ್ ವ್ಯವಸ್ಥೆ ಮಾಡಿರುವ ಕೇರಳದ ಶಾಲೆಗಳ ಕುರಿತಾದ ‘ಕನ್ನಡಪ್ರಭ’ ವರದಿ ವೈರಲ್ ಆಗಿ ರಾಜ್ಯದ ಕೆಲವು ಕಡೆಯೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ, ಕಳೆದ ಮೂರು ದಶಕದಿಂದ ಈ ವ್ಯವಸ್ಥೆ ಜಾರಿಯಲ್ಲಿರುವ ಶಾಲೆಯೊಂದು ರಾಜ್ಯದಲ್ಲಿರುವುದು ಗಮನಕ್ಕೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸ್ನೇಹ ಖಾಸಗಿ ಶಿಕ್ಷಣ ಸಂಸ್ಥೆಯ ಕೆಲವು ತರಗತಿಗಳು ೨೯ ವರ್ಷಗಳಿಂದ ಅರ್ಧ ಚಂದ್ರಾಕೃತಿಯಲ್ಲಿ ನಡೆಯುತ್ತಿವೆ.

೧೯೯೯ರಲ್ಲಿ ಈ ಶಾಲೆ ಆರಂಭಗೊಂಡಾಗಲೇ ವೈವಿಧ್ಯಮಯವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಒಂದಷ್ಟು ಧನಾತ್ಮಕ ಪರಿಣಾಮಗಳನ್ನೂ ಕಂಡುಕೊಳ್ಳಲಾಗಿದೆ. ವೃತ್ತಾಕಾರದಲ್ಲಿ ಬೆಂಚ್ ವ್ಯವಸ್ಥೆ ಮಾಡಿರುವುದರಿಂದ ಮಧ್ಯದಲ್ಲಿ ಏನೂ ಅಡಚಣೆ ಇರುವುದಿಲ್ಲ. ಆದ್ದರಿಂದ ಶಿಕ್ಷಕರಿಗೆ ನೇರವಾಗಿ, ಕ್ಷಿಪ್ರವಾಗಿ ಯಾವುದೇ ಮಗುವಿನ ಬಳಿಗೆ ಹೋಗಲು ಮತ್ತು ಕಲಿಕೆ ಪರಿಶೀಲಿಸಲು ಸಾಧ್ಯವಾಗಿದೆ. ವೃತ್ತಾಕಾರದಲ್ಲಿ ಕುಳಿತ ಮಕ್ಕಳು ಪರಸ್ಪರ ಮುಖಾಮುಖಿ ಆಗುವುದರಿಂದ ಅವರಿಗೆ ಸಭಾ ಕಂಪನವು ಈ ಹಂತದಲ್ಲೇ ಮಾಯವಾಗುತ್ತದೆ. ವೃತ್ತದ ಮಧ್ಯದಲ್ಲಿರುವ ಖಾಲಿ ಜಾಗವು ಮಕ್ಕಳ ಹಾಡು, ನೃತ್ಯ ಮತ್ತು ನಾಟಕಗಳ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ.

ಗೋಡೆಯು ನಿಮ್ನ ಆಕಾರದಲ್ಲಿದ್ದು, ಕರಿಹಲಗೆಯನ್ನು ಗೋಡೆಯಲ್ಲೇ ಮಾಡಿರುವುದರಿಂದ ಅದರಲ್ಲಿ ಬರೆದುದೆಲ್ಲವೂ ಮಕ್ಕಳಿಗೆ ಕಾಣುತ್ತದೆ. ಎಲ್ಲೇ ಕುಳಿತ ಮಗುವಿಗೆ ಬೋರ್ಡಿನ ಯಾವುದೇ ಮೂಲೆಯಲ್ಲಿ ಬರೆದದ್ದು ಕಾಣಿಸುತ್ತದೆ.

ಮಕ್ಕಳಿಗೂ ಬರೆಯುವ ಅವಕಾಶ ನೀಡುವ ಉದ್ದೇಶದಿಂದ ಕರಿಹಲಗೆಯನ್ನು ತಗ್ಗಿನಲ್ಲಿ ನಿರ್ಮಿಸಲಾಗಿದೆ. ಸಾಕಷ್ಟು ಕಿಟಕಿಗಳಿರುವುದರಿಂದ ವಾಯು ವ್ಯವಸ್ಥೆ ಸುಖದಾಯಕವಾಗಿದೆ. ಚಾವಣಿ ಸುಮಾರು ೧೮ ಅಡಿಗಳಷ್ಟು ಎತ್ತರವಿದೆ. ಬಿಸಿಗಾಳಿ ಮೇಲಕ್ಕೆ ಸಾಗಿ ತರಗತಿಯಲ್ಲಿ ಮಕ್ಕಳು ಇಡೀ ದಿನ ಉಲ್ಲಾಸದಿಂದ ಇರುತ್ತಾರೆ. ವೃತ್ತಾಕಾರದ ಕೊಠಡಿ ಎಂಬುದರಲ್ಲಿ ಸೌಂದರ್ಯ ಮತ್ತು ಉತ್ಸಾಹದ ಪ್ರೇರಣೆ ಇದೆ.

ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು ೧೯೯೦ರ ದಶಕದ ಕೊನೆಗೆ ‘ಚೈತನ್ಯ’ ಎಂಬ ಹೆಸರಿನಲ್ಲಿ ವೃತ್ತಾಕಾರದ ತರಗತಿಗಳನ್ನು ಅನುಮೋದಿಸಿತ್ತು. ಇದರ ಭಾಗವಾಗಿ ೧೯೯೯ರಲ್ಲಿ ಸುಳ್ಯದ ಈ ಸ್ನೇಹ ಶಾಲೆಯಲ್ಲಿ ಕರಾವಳಿ ಶಾಲೆಗಳ ಶಿಕ್ಷಕರಿಗಾಗಿ ಒಂದು ವಾರದ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.

ಸ್ನೇಹ ಶಾಲೆಯಲ್ಲಿ ಇಂತಹ ಮೂರು ಕೊಠಡಿಗಳಿದ್ದು, ಒಂದರಿಂದ ಮೂರನೇ ತರಗತಿಗಳು ಅಲ್ಲಿ ನಡೆಯುತ್ತವೆ.

ಪ್ರಸ್ತುತ ‘ಯು’ ಮಾದರಿಯ ತರಗತಿಗಳು ಪ್ರಚಾರ ಪಡೆಯುತ್ತಿರುವ ಹಾಗೂ ಅಂತಹ ಶಾಲೆಗಳನ್ನು ನಿರ್ಮಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಮತ್ತು ಕೆಲವೆಡೆ ಅನುಷ್ಠಾನವೂ ಆಗುತ್ತಿರುವ ಈ ಹೊತ್ತಿನಲ್ಲಿ ಇಂದಿಗಿಂತ ಮೂರು ದಶಕಗಳ ಹಿಂದೆಯೇ ಸುಳ್ಯದ ಪ್ರಕೃತಿ ಸಂಪತ್ಭರಿತ ಸ್ನೇಹ ಶಾಲೆಯಲ್ಲಿ ಈ ಮಾದರಿಯನ್ನು ಅಳವಡಿಸಿ ಪ್ರಯೋಜನ ಪಡೆಯಲಾಗಿದೆ.

ಆಸಕ್ತರು ಯಾವಾಗ ಬೇಕಿದ್ದರೂ ಬಂದು ಈ ಮಾದರಿಯನ್ನು ನೋಡಬಹುದು ಎನ್ನುತ್ತಾರೆ ಸಂಸ್ಥೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ.

ಶಿಕ್ಷಣ ಇಲಾಖೆ ನಿರ್ಲಕ್ಷ್ಯ

ಕರ್ನಾಟಕದ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯ ಒಬ್ಬ ಅಧಿಕಾರಿಯೂ ನಮ್ಮ ಶಾಲೆಯ ನೈಸರ್ಗಿಕ ಶಿಕ್ಷಣ ಸೌಲಭ್ಯಗಳನ್ನಾಗಲಿ, ನಮ್ಮ ಸೃಜನಾತ್ಮಕ ರಚನೆಗಳನ್ನಾಗಲಿ ನೋಡಲು ಬಂದಿಲ್ಲ ಎನ್ನುವ ಕೊರಗು ಸ್ನೇಹ ಶಿಕ್ಷಣ ಸಂಸ್ಥೆಯದ್ದು. ನಮ್ಮ ಶಾಲೆಗೆ ಅರಣ್ಯ ಇಲಾಖೆಯಿಂದ ‘ಅರಣ್ಯಮಿತ್ರ’ ಪ್ರಶಸ್ತಿ ಮತ್ತು ಜಿಲ್ಲಾ ಪಂಚಾಯಿತಿಯಿಂದ ‘ಜಲಮಿತ್ರ’ ಪ್ರಶಸ್ತಿಗಳು ಬಂದಿವೆ. ಕನ್ನಡ ಸಾಹಿತ್ಯ ಪರಿಷತ್‌ ‘ಹಸಿರು ಶಾಲೆ’ ಪ್ರಶಸ್ತಿ ಬಂದಿದೆ. ಆದರೆ ಶಿಕ್ಷಣ ಇಲಾಖೆ ಈವರೆಗೆ ಗುರುತಿಸಿಲ್ಲ. ಹಾಗಾಗಿ ನಮ್ಮ ವೃತ್ತಾಕಾರದ ಕೊಠಡಿಗಳೂ ಪ್ರಚಾರ ಪಡೆದಿಲ್ಲ ಎನ್ನುತ್ತಾರೆ ಸಂಸ್ಥೆಯವರು.

ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು ೧೯೯೬ರಲ್ಲಿ ತೆರೆದಾಗ ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟಿದೆವು. ಅವುಗಳ ಒಳಗೆ ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ಕಳೆದ ೨೯ ವರ್ಷಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಒಂದು ತರಗತಿಗೆ ೩೦ ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ನೀತಿ ಇದೆ. 20 ಅಡಿಗಳ ವ್ಯಾಸದ ಈ ಕೊಠಡಿಗಳಲ್ಲಿ ಒಂದೇ ವೃತ್ತದಲ್ಲಿ ಗೋಡೆಯ ಪರಿಧಿಯಲ್ಲಿ ೩೦ ಮಕ್ಕಳನ್ನು ಕೂರಿಸಲು ಸಾಧ್ಯವಾಗಿದೆ. ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣದಿರುವುದು ಇತ್ಯಾದಿ ಸಮಸ್ಯೆಗಳು ಈತನಕ ಬಂದಿಲ್ಲ. ಬ್ಯಾಕ್ ಬೆಂಚರ್ ಸಮಸ್ಯೆಯನ್ನು ನೀಗಿಸಿದ್ದಲ್ಲದೆ, ಇದರಿಂದಾಗಿ ಇತರ ಹಲವು ಪ್ರಯೋಜನಗಳನ್ನೂ ಪಡೆಯಲಾಗಿದೆ.

-ಡಾ। ಚಂದ್ರಶೇಖರ ದಾಮ್ಲೆ , ಅಧ್ಯಕ್ಷ, ಸ್ನೇಹ ಶಿಕ್ಷಣ ಸಂಸ್ಥೆ.

ಕುತ್ತಿಗೆ, ಬೆನ್ನು ನೋವು ಇಲ್ಲ

ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು ೧೯೯೬ರಲ್ಲಿ ತೆರೆದಾಗ ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟಿದೆವು. ಅವುಗಳ ಒಳಗೆ ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ಕಳೆದ ೨೯ ವರ್ಷಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣದಿರುವುದು ಇತ್ಯಾದಿ ಸಮಸ್ಯೆಗಳು ಈತನಕ ಬಂದಿಲ್ಲ. -ಡಾ। ಚಂದ್ರಶೇಖರ ದಾಮ್ಲೆ , ಅಧ್ಯಕ್ಷ, ಸ್ನೇಹ ಶಿಕ್ಷಣ ಸಂಸ್ಥೆ

PREV
Read more Articles on

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ