ಕುಮಟಾ ಪುರಸಭೆಗೆ ಸುಮತಿ ಭಟ್ಟ ಅಧ್ಯಕ್ಷೆ, ಮಹೇಶ ನಾಯ್ಕ ಉಪಾಧ್ಯಕ್ಷ

KannadaprabhaNewsNetwork | Published : Jan 29, 2025 1:32 AM

ಸಾರಾಂಶ

ಕುಮಟಾ ಪುರಸಭೆಗೆ ಬಿಜೆಪಿ ಬೆಂಬಲಿತರು ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕುಮಟಾ: ಇಲ್ಲಿನ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ರಾ.ರಾ. ಅಣ್ಣಾ ಪೈ ಸಭಾಭವನದಲ್ಲಿ ನಡೆದು ಅಧ್ಯಕ್ಷರಾಗಿ ಸುಮತಿ ನಾರಾಯಣಮೂರ್ತಿ ಭಟ್ಟ ಹಾಗೂ ಉಪಾಧ್ಯಕ್ಷರಾಗಿ ಮಹೇಶ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.

ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಸತೀಶ ನಾಯ್ಕ ಮಾತನಾಡಿ, ನಿಗದಿತ ಅವಧಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರಗಳು ಕ್ರಮಬದ್ಧವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸುಮತಿ ಭಟ್ಟ ಅವರ ಹೆಸರನ್ನು ಸುಶೀಲಾ ಗೋವಿಂದ ನಾಯ್ಕ ಸೂಚಿಸಿದರೆ, ಗೀತಾ ಮುಕ್ರಿ ಅನುಮೋದಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ ನಾಯ್ಕ ಹೆಸರನ್ನು ಅನುರಾಧಾ ಬಾಳೇರಿ ಸೂಚಿಸಿದ್ದು, ಮೋಹಿನಿ ಗೌಡ ಅನುಮೋದಿಸಿದ್ದಾರೆ. ಅಂತಿಮವಾಗಿ ಯಾವುದೇ ಸ್ಪರ್ಧೆ ಇಲ್ಲದಿರುವುದರಿಂದ ಕ್ರಮಬದ್ಧ ನಾಮಪತ್ರಗಳನ್ನು ಪರಿಗಣಿಸಿ ಅಧ್ಯಕ್ಷರಾಗಿ ಸುಮತಿ ಭಟ್ಟ ಹಾಗೂ ಉಪಾಧ್ಯಕ್ಷರಾಗಿ ಮಹೇಶ ನಾಯ್ಕ ಆಯ್ಕೆಯಾಗಿದ್ದಾರೆಂದು ಘೋಷಿಸುವುದಾಗಿ ಪ್ರಕಟಿಸಿದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಲ್ಲಿನ ಪುರಸಭೆಗೆ ಬಿಜೆಪಿ ಬೆಂಬಲಿತರು ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ೫ ತಿಂಗಳ ಹಿಂದೆಯೇ ಆಗುತ್ತಿತ್ತು. ಆದರೆ ವಿರೋಧ ಪಕ್ಷವಾದ ಕಾಂಗ್ರೆಸ್‌ನವರು ವಿನಾಕಾರಣ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಭಿವೃದ್ಧಿಗೆ ಅಡ್ಡಗಾಲಾದರು. ನ್ಯಾಯಾಲಯ ಪ್ರಕರಣವನ್ನು ತಳ್ಳಿ ಹಾಕಿ ಪುನಃ ಜನಪ್ರತಿನಿಧಿಗಳ ಆಡಳಿತಕ್ಕೆ ಅವಕಾಶ ನೀಡಿದೆ ಎಂದರು.

ಇನ್ನಾದರೂ ಪುರಸಭೆಯಲ್ಲಿ ಉತ್ತಮ ವಿರೋಧ ಪಕ್ಷವಾಗಿ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವ ಹೊಣೆಯನ್ನು ವಿರೋಧ ಪಕ್ಷ ಪ್ರದರ್ಶಿಸಬೇಕು. ನಮ್ಮ ಪಕ್ಷದ ಬೆಂಬಲಿತ ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಪ್ರಗತಿ ಕಾರ್ಯಗಳನ್ನು ಮಾಡಲು ಎಲ್ಲ ಮಾರ್ಗದರ್ಶನ ಹಾಗೂ ಸಹಕಾರ ನೀಡಲಾಗುವುದು ಎಂದರು.ಅಧ್ಯಕ್ಷೆ ಸುಮತಿ ಭಟ್ಟ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ, ಆ ನಿಟ್ಟಿನಲ್ಲಿ ಶಾಸಕರ ಹಾಗೂ ಎಲ್ಲ ಸದಸ್ಯರ, ಅಧಿಕಾರಿಗಳ ಸಹಕಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು. ಅಧ್ಯಕ್ಷರಾಗಿ ಆಯ್ಕೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲೇ ನಿಗದಿಯಾದ ಸಾಮಾನ್ಯ ಮೀಸಲಾತಿಗೂ ಅಡ್ಡಿ ಮಾಡಿ, ಪಟ್ಟಣದ ಅಭಿವೃದ್ಧಿ ಕಾರ್ಯಗಳ ಕುಂಠಿತಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಪ್ರಯತ್ನಪಟ್ಟಿದ್ದು ನಿಜಕ್ಕೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಮೊದಲು ಮೀಸಲಾತಿ ನಿಗದಿಗೆ ವಿಳಂಬ, ನಂತರ ನ್ಯಾಯಾಲಯದ ತಡೆಯಾಜ್ಞೆಯಿಂದ ಒಂದೂವರೆ ವರ್ಷದಷ್ಟು ಕಾಲ ಪುರಸಭೆಗೆ ಸಮರ್ಪಕ ಆಡಳಿತವಿಲ್ಲದೇ ಅಭಿವೃದ್ಧಿಗೆ ಹಿನ್ನಡೆಯಾಗಲು ಕಾಂಗ್ರೆಸ್ ಕಾರಣ. ಸಾಮಾನ್ಯ ಮೀಸಲಾತಿಯಲ್ಲಿ ಎಲ್ಲರಿಗೂ ಸ್ಪರ್ಧಿಸಲು ಅವಕಾಶವಿದ್ದರೂ ತಡೆಯಾಜ್ಞೆ ತಂದಿದ್ದು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ತಡೆಯಾಜ್ಞೆ ತಂದಿದ್ದವರು ಇನ್ನಾದರೂ ತಮ್ಮದೇ ಕಾಂಗ್ರೆಸ್ ರಾಜ್ಯ ಸರ್ಕಾರದ ಅಡಿಯಲ್ಲಿ ಹೆಚ್ಚಿನ ಅನುದಾನ ತರಿಸಿ ಕುಮಟಾದ ಪಟ್ಟಣದ ಪ್ರಗತಿಗೆ ಕೈಜೋಡಿಸಲಿ ಎಂದು ಸವಾಲೆಸೆದರು. ಬಳಿಕ ಬಿಜೆಪಿ ಬೆಂಬಲಿತ ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಥಬೀದಿಯ ಲಕ್ಷ್ಮೀ ವೆಂಕಟ್ರಮಣ ದೇವರಲ್ಲಿ ಪೂಜೆ ಸಲ್ಲಿಸಿ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದರು. ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸದಸ್ಯರಾದ ಮೋಹಿನಿ ಗೌಡ, ಗೀತಾ ಮುಕ್ರಿ, ತುಳಸು ಗೌಡ, ಸೂರ್ಯಕಾಂತ ಗೌಡ, ರಾಜೇಶ ಪೈ, ಸಂತೋಷ ನಾಯ್ಕ, ಅನುರಾಧ ಬಾಳೇರಿ, ಸೂರ್ಯಕಾಂತ ಗೌಡ, ಕಿರಣ ಅಂಬಿಗ, ಪಲ್ಲವಿ ಮಡವಾಳ, ಇಸಾಕ್ ಹುಸೇನ ಶಮಾಲಿ, ಛಾಯಾ ವೆಂಗುರ್ಲೆಕರ, ಅನಿಲ ಹರ್ಮಲಕರ ಇತರರು ಹಾಗೂ ನಾಮನಿರ್ದೇಶಿತ ಸದಸ್ಯ ಕಾಂತರಾಜ ನಾಯ್ಕ ಇದ್ದರು.

Share this article