ಶಿಗ್ಗಾಂವಿ: ಬೇಸಿಗೆ ಶಿಬಿರ ಮಕ್ಕಳಿಗೆ ಹಲವು ರೀತಿಯ ಲಾಭಗಳನ್ನು ನೀಡುತ್ತವೆ. ಶಿಬಿರದಲ್ಲಿ ಕಲೆ, ಕ್ರೀಡೆ, ಸಂಗೀತ, ನೃತ್ಯ ನಾಟಕಗಳಲ್ಲಿ ಪರಿಣಿತಿ ಹೊಂದಿರುವ ತರಬೇತಿದಾರರಿಂದ ಹೇಳಿಕೊಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾರತ ಸೇವಾ ಸಂಸ್ಥೆ ಬನ್ನೂರ ವತಿಯಿಂದ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿ, ಈ ಶಿಬಿರದಿಂದ ಹೊಸದನ್ನು ಕಲಿಯಲು ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಮಕ್ಕಳಲ್ಲಿನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ. ಬೇರೆಯವರೊಡನೆ ಬೆರೆತುಕೊಂಡು ತಂಡಗಳಲ್ಲಿ ಕೆಲಸ ಮಾಡುವ ಮೂಲಕ ಮಕ್ಕಳ ಸಾಮಾಜಿಕ ಕೌಶಲ್ಯ ಅಭಿವೃದ್ಧಿಯಾಗಿ ಶಿಸ್ತು ಮತ್ತು ಸಮಯಪಾಲನೆಯ ಮಹತ್ವವನ್ನು ಮಕ್ಕಳು ಕಲಿಯುತ್ತಾರೆ ಎಂದರು.ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಾರತ ಸೇವಾ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡು ತಾಲೂಕಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಕೆಎಸ್ಆರ್‌ಪಿ ೧೦ನೇ ಪಡೆಯ ಕಮಾಂಡೆಂಟ್ ನಾಗರಾಜ ಮೆಳ್ಳಾಗಟ್ಟಿ ಮಾತನಾಡಿ, ಭಾರತ ಸೇವಾ ಸಂಸ್ಥೆಯು ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಚಿತ ಬೇಸಿಗೆ ಶಿಬಿರವನ್ನು ನೀಡಿ ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಟಿವಿ ಮೊಬೈಲ್ ಬಳಕೆಯನ್ನು ಬಿಟ್ಟು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಲು ಉಪಯುಕ್ತಕಾರಿಯಾದಂತಹ ಕೆಲಸವನ್ನು ಮಾಡಿದೆ ಎಂದರು.ಈ ಸಂದರ್ಭದಲ್ಲಿ ನಜಿರಹ್ಮದ ಶೇಕಸನದಿ, ಭರತ ಕಳ್ಳಿಮನಿ, ಬಸವರಾಜ ಹೊಸಪೇಟೆ, ರವಿ ಮಡಿವಾಳರ, ವಿಜಯ ಬುಳ್ಳಕ್ಕನವರ, ಶಶಿಕಾಂತ ರಾಠೋಡ, ಶಂಕರ ಧಾರವಾಡ, ಸಾಧಿಕ ಸವಣೂರ ದರ್ಶನ ಕರೂರ, ಮಾಲತೇಶ ಮಾದರ ಹಾಗೂ ಪಾಲಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಬೇಸಿಗೆ ಶಿಬಿರದ ಮಕ್ಕಳೊಂದಿಗೆ ಶಾಸಕ ಮಾನೆ ಮಾತುಕತೆ
ಹಾನಗಲ್ಲ: ಇಲ್ಲಿನ ಲೋಯಲಾ ವಿಕಾಸ ಕೇಂದ್ರ ಆಯೋಜಿಸಿದ್ದ ಬೇಸಿಗೆ ಶಿಬಿರದ ವಿದ್ಯಾರ್ಥಿಗಳೊಂದಿಗೆ ಶಾಸಕ ಶ್ರೀನಿವಾಸ ಮಾನೆ ಅವರು ಮಾತುಕತೆ ನಡೆಸಿ, ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡಿದರು.ತಮ್ಮ ಜನಸಂಪರ್ಕ ಕಚೇರಿಯ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಶಾಸಕ ಮಾನೆ ಮಾತುಕತೆ ನಡೆಸಿ, ಶೈಕ್ಷಣಿಕ ಸಾಧನೆಗೆ ಸ್ಫೂರ್ತಿ ತುಂಬಿದರು. ಪ್ರಪಂಚದ ಸ್ಪರ್ಧೆಗೆ ತಾಲೂಕಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಭವಿಷ್ಯ ಗಟ್ಟಿಗೊಳಿಸುವ ದೃಢಸಂಕಲ್ಪದೊಂದಿಗೆ ಗಟ್ಟಿ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಿ ಪರಿಣಿತರಿಂದ ತರಬೇತಿ ದೊರಕಿಸಲಾಗುತ್ತಿದೆ ಎಂದರು.ತಹಸೀಲ್ದಾರ್ ರೇಣುಕಾ ಎಸ್., ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಫಾ. ವಿನ್ಸಂಟ್ ಜೇಸನ್, ಸಿಬ್ಬಂದಿಗಳಾದ ಲೋಹಿತ್ ಕಾಟಣ್ಣನವರ, ಮೈಲಾರಿ ಜಾಡರ, ಗೀತಾ ಬಿ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಆದರ್ಶ ಶೆಟ್ಟಿ, ರಾಮಚಂದ್ರ ಕಲ್ಲೇರ, ಉಮೇಶ ದೊಡ್ಡಮನಿ, ಸುರೇಶ ನಾಗಣ್ಣನವರ, ಯಲ್ಲಪ್ಪ ನಿಂಬಣ್ಣನವರ, ಮಾಲತೇಶ ಕಾಳೆ ಇದ್ದರು.