ರಾಗ ಮಯೂರಿ ಅಕಾಡೆಮಿ ಆಯೋಜನೆ ಮಾಡಿರುವ ರಾಜ್ಯ ಮಟ್ಟದ ಚಿಣ್ಣರ ಕಲರವ 2024 ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಕ್ಕಳು ಕ್ರಿಯಾಶೀಲರಾಗಬೇಕಾದರೆ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ತಿಳಿಸಿದರು.
ಶುಕ್ರವಾರ ಅಗ್ರಹಾರದ ಅನ್ನಪೂರ್ಣಮ್ಮ ರಂಗನಾಥ ರಾವ್ ಸಭಾಂಗಣದಲ್ಲಿ ರಾಗಮಯೂರಿ ಅಕಾಡೆಮಿ ಆಯೋಜನೆ ಮಾಡಿರುವ 12 ದಿನಗಳ ವರ್ಣ ವೈಭವ ಚಿಣ್ಣರ ಕಲರವ -2024 ರಾಜ್ಯಮಟ್ಟದ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪುಟ್ಟ ಮಕ್ಕಳು ವರ್ಷದ 10 ತಿಂಗಳು ಪಠ್ಯ ಪುಸ್ತಕಕ್ಕೆ ಸೀಮಿತ ರಾಗುತ್ತಾರೆ. ಉಳಿದ 2 ತಿಂಗಳ ಬೇಸಿಗೆ ರಜೆಗೆ ಹೆಚ್ಚಾಗಿ ಅಜ್ಜ, ಅಜ್ಜಿಯ ಮನೆಗೆ ಹೋಗುತ್ತಾರೆ. ಕೆಲವು ಮಕ್ಕಳು ಟಿ.ವಿ. ನೋಡುತ್ತಾ ಕಾಲ ಕಳೆಯುತ್ತಾರೆ. ರಾಗ ಮಯೂರಿ ಅಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್ ಅವರು 12 ದಿನಗಳ ವಿಶೇಷ ಬೇಸಿಗೆ ಶಿಬಿರ ಏರ್ಪಡಿಸಿದ್ದಾರೆ. ಕಲೆ ಯಾರ ಸೊತ್ತಲ್ಲ. ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಏಕಾಗ್ರತೆಯಿಂದ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಟ್ಟಿದ್ದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.ತಾಲೂಕು ಬ್ರಾಹ್ಮಣ ಮಹಾ ಸಭಾದ ಮಾಜಿ ಅಧ್ಯಕ್ಷ ಎನ್.ಶ್ರೀನಾಥ್ ಮಾತನಾಡಿ, ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ. ಈ ಭಾಗದಲ್ಲಿ ಚಿಣ್ಣರ ಮೇಳ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಮಕ್ಕಳು ವಿದೇಶಿ ಸಂಸ್ಕೃತಿ ಮರೆತು ನಮ್ಮ ದೇಶೀಯ ಕಲೆಕಲಿಯಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಬೇಸಿಗೆ ಶಿಬಿರ ಸಹಕಾರಿ ಎಂದರು.
ರಾಗ ಮಯೂರಿ ಆಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್ ಮಾತನಾಡಿ, ಪಟ್ಟಣದ ಮಕ್ಕಳಿಗೆ ಯಾವುದೇ ಕ್ಷೇತ್ರದಲ್ಲಿ ಕಲಿಯಲು ಅವಕಾಶ ಜಾಸ್ತಿ ಸಿಗಲಿದೆ. ಆದರೆ, ಗ್ರಾಮೀಣ ಪ್ರದೇಶದ ಮಕ್ಕಳು ಅವಕಾಶದಿಂದ ವಂಚಿತ ರಾಗುತ್ತಾರೆ. ಅವಕಾಶ ಸಿಕ್ಕಿದರೆ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣದ ಮಕ್ಕಳಷ್ಟೇ ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ. ಇಲ್ಲಿಯ ಮಕ್ಕಳಿಗೂ ವಿಶೇಷ ಬೇಸಿಗೆ ಶಿಬಿರ ನಡೆಸಬೇಕು ಎಂದು ನನ್ನ ಕನಸು ನನಸಾಗಿದೆ. 12 ದಿನಗಳ ಚಿಣ್ಣರ ಮೇಳ ಬೇಸಿಗೆ ಶಿಬಿರದಲ್ಲಿ ಮಜಾ ಭಾರತ ಮತ್ತು ಗಿಚ್ಚಿ ಗಿಲಿ,ಗಿಲಿ ಖ್ಯಾತಿಯ ಚಿಲ್ಲರ್ ಮಂಜ, ಶಿಡಶ್ಯಾಡ ಶಿವ, ರಂಗಭೂಮಿ ಕಲಾವಿದೆ ಸುಮನ ಪ್ರಸಾದ್, ರಂಗ ಭೂಮಿ ಕಲಾವಿದ ಮಿಥುನ್ ಕುಮಾರ ಸೋನ, ರಂಗ ಭೂಮಿ ಕಲಾವಿದೆ ಅರ್ಪಿತ ಸುಳ್ಯ, ಮಿಮಿಕ್ರಿ ಕಲಾವಿದೆ ಸಾಯಿಶೃತಿ ಪಿಲಿಕಜೆ ಭಾಗವಹಿಸಿ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಸಮಾರೋಪ ಸಮಾರಂಭದಲ್ಲಿ ಮಕ್ಕಳು ವೇದಿಕೆ ಮೇಲೆ ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ ಎಂದರು.ಮಕ್ಕಳ ಪೋಷಕರಾದ ಅಭಿನವ ಗಿರಿರಾಜ್, ನಂದಿನಿ ಆಲಂದೂರು,ವಾಣಿನರೇಂದ್ರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಮಡಬೂರಿನ ಜಮೀನ್ದಾರ್ ವನಮಾಲ ಧನಂಜಯ ಉದ್ಘಾಟಿಸಿದರು. ಅತಿಥಿಗಳಾಗಿ ಜಮೀನ್ದಾರ್ ಧನಂಜಯ, ರಂಗಭೂಮಿ ಕಲಾವಿದೆ ಸುಮನಪ್ರಸಾದ್, ರಾಗಮಯೂರಿ ಅಕಾಡೆಮಿ ಕಾರ್ಯದರ್ಶಿ ಪ್ರಜ್ವಲ್, ಸುನೀತ ಇದ್ದರು.