ಮಾಗಡಿ: ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮಕ್ಕಳಿಗೆ ಕೇವಲ ಪಾಠ್ಯಪುಸ್ತಕದ ಜ್ಞಾನ ಮಾತ್ರವಲ್ಲ, ದೈಹಿಕ ಆರೋಗ್ಯ, ಮಾನಸಿಕ ಶಾಂತಿ, ಸಂಸ್ಕಾರ ಮತ್ತು ಸಾಮಾಜಿಕ ಬದುಕಿನ ಮೌಲ್ಯಗಳೂ ಅಗತ್ಯವಾಗಿವೆ ಎಂದು ಯೋಗ ಶಿಕ್ಷಕ ಯೋಗಶ್ರೀ ಮಲ್ಲಣ್ಣ ಹೇಳಿದರು.
ಶ್ರೀ ವಿವೇಕ ಭಾರತಿ ಪ್ರಗತಿ ಕೇಂದ್ರದ ಸಂಸ್ಥಾಪಕ ವಿ.ವಿಜಯ್ ಮಾತನಾಡಿ, ಧ್ಯಾನ ಮನಸ್ಸಿಗೆ ಶಾಂತಿ ನೀಡುವ ಒಂದು ಅದ್ಭುತ ವಿಧಾನವಾಗಿದೆ. ಮಕ್ಕಳಲ್ಲಿ ಸಹನೆ, ಶಿಸ್ತಿನ ಮನೋಭಾವ ಮತ್ತು ಒಳ್ಳೆಯ ಚಿಂತನೆ ಬೆಳೆಸಲು ಧ್ಯಾನ ಬಹಳ ಸಹಾಯಕ. ಕೆಲವು ನಿಮಿಷಗಳ ಧ್ಯಾನವೂ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಓದಿನಲ್ಲಿಯೂ ಉತ್ತಮ ಏಕಾಗ್ರತೆಯನ್ನು ನೀಡುತ್ತದೆ. ಇಂತಹ ಅಭ್ಯಾಸಗಳು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಯೋಗ ಶಿಕ್ಷಕಿ ವಾಣಿಶ್ರೀ ಮಾತನಾಡಿ, ಗ್ರಾಮೀಣ ಆಟಗಳ ಬಗ್ಗೆ ಇಂದಿನ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಚಿನ್ನಿದಾಂಡು, ಲಗೋರಿ, ಕುಂಟೆಬಿಲ್ಲೆ, ಕಬ್ಬಡ್ಡಿ, ಗೋಲಿ ಆಟ, ಅಂತ್ಯಾಕ್ಷರಿ ಮುಂತಾದ ಆಟಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆಟಗಳು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಲ್ಲ ಅವುಗಳಿಂದ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ, ತಂಡಭಾವನೆ ಮತ್ತು ಸ್ನೇಹವನ್ನು ಬೆಳೆಸುವ ಸಾಧನಗಳಾಗಿವೆ. ಈ ಆಟಗಳ ಮೂಲಕ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಗ್ರಾಮೀಣ ಪರಂಪರೆಯನ್ನು ಅರಿಯುತ್ತಾರೆ ಎಂದರು.ಆಧ್ಯಾತ್ಮ ಚಿಂತಕ ರೂಪೇಶ್ ಕುಮಾರ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಗಳಾಗಿವೆ. ಇಲ್ಲಿ ಮಕ್ಕಳು ಹೊಸ ಸ್ನೇಹಿತರನ್ನು ಪಡೆಯುತ್ತಾರೆ, ಹೊಸ ವಿಚಾರಗಳನ್ನು ಕಲಿಯುತ್ತಾರೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಇಂತಹ ಶಿಬಿರಗಳು ಮಕ್ಕಳಲ್ಲಿ ನಾಯಕತ್ವ ಗುಣ, ಸಮಯಪಾಲನೆ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸಲು ಸಹಾಕವಾಗಿದ್ದು ಪೋಷಕರು ಇಂತಹ ಶಿಬಿರಗಳಲ್ಲಿ ಮಕ್ಕಳು ಭಾಗವಹಿಸಲು ಪ್ರೇರಣೆ ನೀಡಬೇಕು ಎಂದರು.
ಶಿಕ್ಷಕಿ ಪವಿತ್ರ ಮಾತನಾಡಿ, ಇಂದಿನ ಮಕ್ಕಳು ಹೆಚ್ಚು ಮೊಬೈಲ್, ಟಿವಿ ಮತ್ತು ಇತರ ಸಾಮಾಜಿಕ ಮಾಧ್ಯಮಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಯೋಗ ಮತ್ತು ಧ್ಯಾನದ ಅಭ್ಯಾಸವು ಮಕ್ಕಳ ದೇಹವನ್ನು ಲವಲವಿಕೆಯಿಂದ ಇಟ್ಟು, ಏಕಾಗ್ರತೆಯನ್ನು ವೃದ್ಧಿಸುತ್ತದೆ ಎಂದು ಹೇಳಿದರು.