ಶಿಕಾರಿಪುರ: ಬಾಲ್ಯದಿಂದಲೇ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ದೈಹಿಕ ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಬಿ ಲೋಕೇಶಪ್ಪ ತಿಳಿಸಿದರು.
ಸೋಮವಾರ ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ, ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘದಿಂದ ಪಟ್ಟಣದ ಶಾಂತಿನಗರದ ಕಂತೆ ಸಿದ್ದೇಶ್ವರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಬೇಸಿಗೆ ಶಿಬಿರವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ದಿನ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ರಜಾ ಅವಧಿಯಲ್ಲಿ ಮಕ್ಕಳು ಮನೆಯಲ್ಲಿ ಕೂರುವುದರಿಂದ ಮೊಬೈಲು, ಕಂಪ್ಯೂಟರ್, ಗ್ಯಾಜೆಟ್‌ಗಳ ಹಾವಳಿಯಲ್ಲಿ ಮುಳಗಿ ಮನಸ್ಸು ವ್ಯಗ್ರವಾಗುತ್ತದೆ. ದಾರಾವಾಹಿಗಳ ವಿಪರೀತ ವೀಕ್ಷಣೆಯಿಂದ ಅದರಲ್ಲಿ ಪ್ರಸಾರವಾಗುವ ಸಂದೇಶವು ಕುಟುಂಬದಲ್ಲಿ ಅಪನಂಬಿಕೆ, ದ್ವೇಷ, ಆಸೂಯೆ ಹುಟ್ಟಿಸಿ ಸಂಬಂಧವನ್ನು ಛಿದ್ರಗೊಳಿಸುತ್ತದೆ ಎಂದು ತಿಳಿಸಿದರು.ಬೇಸಿಗೆ ಶಿಬಿರಗಳಿಗೆ ಹಾಜರಾಗುವುದರಿಂದ ಜಾನಪದ ಕಲಾಪ್ರಕಾರಗಳ ಪರಿಕರಗಳ ಪರಿಚಯವಾಗುತ್ತದೆ. ಚಿತ್ರಕಲೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಆನೆ ಬಂತೊಂದಾನೆ, ರಂಗೋಲಿ, ಲಗೋರಿ, ಗೋಲಿ, ಬುಗುರಿ, ಚಿನ್ನಿದಾಂಡು, ಚೆನ್ನೆ ಮಣೆ ಮತ್ತಿತರ ಹಲವು ಜಾನಪದ ಕ್ರೀಡೆಗಳಿಂದ ಮಾನಸಿಕ ಬೌದ್ಧಿಕ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಸಂಗೀತ ಶ್ಲೋಕ, ಯೋಗ, ಧ್ಯಾನ, ವ್ಯಾಯಾಮ, ವಚನ ಗಾಯನದಿಂದ ಮನಸ್ಸು ವಿಕಾಸವಾಗುತ್ತದೆ. ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು ಸಂಪನ್ಮೂಲ ವ್ಯಕ್ತಿಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಕಲೆ, ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸುವುದು. ವೈಚಾರಿಕ ಮೌಲ್ಯಗಳನ್ನು ಕಲಿಸಿಕೊಡುವುದು, ಮಕ್ಕಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪೋಷಕರು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ರಾಜ್ಯ ತೋಟಗಾರಿಕಾ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಸಂದೇಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಜಿ.ಎಂ.ನಾಗರಾಜ್ ವಹಿಸಿದ್ದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ತಾ.ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಂಘದ ಉಪಾಧ್ಯಕ್ಷ ಪರಶುರಾಮ್ ಚೌಟಗಿ, ಲೆಕ್ಕ ಪರಿಶೋಧನಾ ಸಮಿತಿ ಅಧ್ಯಕ್ಷ ವೀರನಗೌಡ, ಸಮಿತಿಯ ಅಧ್ಯಕ್ಷ ಕೆ.ಎಚ್.ಪುಟ್ಟಪ್ಪ, ಪರಮೇಶ್ವರಪ್ಪ ಅಡಗಂಟಿ, ಲೋಕೇಶ್ವರ ಸಿ,ಬನಶರಿ ಕುಶ್ಮಿತ ಮಿನರಲ್ಸ್,ಮಾಲೀಕ ಕಿರಣ್ ಕಾಂತ, ಶಶಿಕಲಾ ಮಂಜಪ್ಪ, ಬಿ.ಸಿ.ದೇವರಾಜ್, ಬಸವರಾಜ್, ಧನಂಜಯ, ಮಲ್ಲಿಕಾರ್ಜುನ್ ಆಚಾರ್, ಸಂದೀಪ್ ಮತ್ತಿತರರುದ್ದರು.