ಬೇಸಿಗೆ ರಜೆ: ಹರಿದು ಬರುತ್ತಿದೆ ದಂಡು

KannadaprabhaNewsNetwork |  
Published : Apr 16, 2026, 02:30 AM IST
ಹರಿದು ಬರುತ್ತಿದೆ ಪ್ರವಾಸಿಗರ ದಂಡು, ಹೋಟೆಲ್ ಗಳಿಗೆ ಬಾಧಿಸಿದೆ ಗ್ಯಾಸ್ ಪ್ರಾಬ್ಲಮ್ | Kannada Prabha

ಸಾರಾಂಶ

ಶಾಲಾ -ಕಾಲೇಜುಗಳ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದು ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರು ಜಾಲಿ ಮೂಡ್‌ಗೆ ಜಾರಿದ್ದಾರೆ.

ಕುಟುಂಬ ಸಮೇತರಾಗಿ ಸಮುದ್ರಕ್ಕಿಳಿದು ಮೋಜು ಮಸ್ತಿ ಮಾಡುತ್ತಿರುವ ಪ್ರವಾಸಿಗರು

ಹೋಟೆಲ್‌ಗಳಿಗೆ ಬಾಧಿಸುತ್ತಿರುವ ಗ್ಯಾಸ್ ಸಮಸ್ಯೆ

ಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ಶಾಲಾ -ಕಾಲೇಜುಗಳ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದು ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರು ಜಾಲಿ ಮೂಡ್‌ಗೆ ಜಾರಿದ್ದಾರೆ. ಕುಟುಂಬ ಸಮೇತರಾಗಿ ತಾಲೂಕಿನ ಸಮುದ್ರ ತೀರಗಳಿಗೆ, ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಬೀಚ್‌ಗಳಲ್ಲಿ ಜನಸ್ತೋಮ ಸೇರುತ್ತಿದೆ. ಬಿರು ಬೇಸಿಗೆ ಬಿಸಿಲಿನ ತಾಪವನ್ನು ಲೆಕ್ಕಿಸದೆ ಪ್ರವಾಸಿಗರ ದಂಡೆ ತಾಲೂಕಿಗೆ ಹರಿದು ಬರುತ್ತಿದೆ.ಸಮುದ್ರ ತೀರಗಳಲ್ಲಿ ಜನರು ಸಮುದ್ರಕ್ಕಿಳಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಪ್ರಮುಖ ದೇವಾಲಯಗಳಲ್ಲಿ ದೇವರ ದರ್ಶನ ಪಡೆಯಲು ಸಾಲುಗಟ್ಟಿ ನಿಲ್ಲುವ ಚಿತ್ರಣ ಸಾಮಾನ್ಯವಾಗಿವೆ. ಇದರಿಂದ ವಾಹನ ದಟ್ಟಣೆಯೂ ಉಂಟಾಗುತ್ತಿದೆ.ಸ್ಥಳೀಯ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡುವುದಕ್ಕೆ ಪರದಾಡಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಬೆಂಗಳೂರು, ದೆಹಲಿ, ಮುಂಬೈ, ಹೈದ್ರಾಬಾದ್ ಗಳಿಂದ ಹೊನ್ನಾವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅವರು ಮುಖ್ಯವಾಗಿ ಇಲ್ಲಿನ ಇಕೋ ಬೀಚ್, ಕಾಂಡ್ಲಾವನ ಮತ್ತು ಶರಾವತಿ ಬೋಟಿಂಗ್ ಗೆ ಮನಸ್ಸು ಮಾಡುತ್ತಾರೆ. ಹೀಗಾಗಿ ವಾಹನ ಜಂಗುಳಿಯಿಂದ ತುಂಬಿರುತ್ತದೆ. ಬೋಟಿಂಗ್ ಹೋಗಲು ಇಚ್ಛೆಯನ್ನು ಹೊಂದುವ ಪ್ರವಾಸಿಗರು ತಮ್ಮ ದೊಡ್ಡ ದೊಡ್ಡ ಬಸ್, ಟ್ರಾವೆಲ್ಲರ್ ಗಳನ್ನು ಹೆಚ್ಚಾಗಿ ತೆಗೆದುಕೊಂಡು ಬರುತ್ತಾರೆ. ತಾಲೂಕಿನ ಬೋಟಿಂಗ್ ಗೆ ಹೋಗುವ ಕೆಳಗಿನ ಪಾಳ್ಯಾ ರಸ್ತೆ ಅತ್ಯಂತ ಇಕ್ಕಟ್ಟಾಗಿದ್ದು , ಸಿಂಗಲ್ ರೋಡ್ ಆಗಿರುತ್ತದೆ. ಹೀಗಾಗಿ ಪ್ರವಾಸಿಗರ ಬಸ್ ಗಳು ಅಲ್ಲಿ ಹೋದರೆ ಎದುರುಗಡೆಯ ವಾಹನ ಸಂಚರಿಸಲು ತೀರಾ ಕಷ್ಟವಾಗುತ್ತದೆ. ಹೋಟೆಲ್‌ಗಳಿಗೆ ಬಾಧಿಸಿದೆ ಗ್ಯಾಸ್ ಸಮಸ್ಯೆ:ತಾಲೂಕಿನ ರೆಸ್ಟೊರೆಂಟ್‌ಗಳು, ಹೋಟೆಲ್‌ಗಳು, ಹೋಮ್ ಸ್ಟೇಗಳು, ರೆಸಾರ್ಟ್‌ಗಳು ಫುಲ್ ಆಗುತ್ತಿವೆ. ಇದು ರಜಾ ಸೀಸನ್ ಆಗಿರುವುದರಿಂದ ಹೋಟೆಲ್‌ಗಳು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳುವ ಯೋಚನೆಯಲ್ಲಿವೆ. ಆದರೆ ಎಲ್ಲೆಡೆ ಉಂಟಾಗಿರುವ ಅಡುಗೆ ಅನಿಲ ಕೊರತೆಯಿಂದಾಗಿ ಹೋಟೆಲ್‌ಗಳಲ್ಲಿ ವಿವಿಧ ಬಗೆಯ ಖಾದ್ಯ ಮಾಡುವುದು ಸಮಸ್ಯೆಯಾಗಿದೆ. ಗ್ಯಾಸ್ ಇಲ್ಲದೆ ಕಟ್ಟಿಗೆ ಒಲೆ ಹಾಕಿ ಅಡುಗೆ, ತಿಂಡಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಹಲವರು ದೇವಾಲಯದಲ್ಲಿ ನೀಡುವ ಪ್ರಸಾದ ಭೋಜನಕ್ಕೆ ತೆರಳುತ್ತಾರೆ. ಅಲ್ಲಿಯೂ ಸಹ ಗ್ಯಾಸ್ ಸಮಸ್ಯೆ ಉಂಟಾಗಿ ಸೌದೆ ಒಲೆಯ ಅಡುಗೆಯನ್ನು ಮಾಡಿ ಬಡಿಸುತ್ತಿದ್ದಾರೆ.ಸ್ಥಳೀಯರ ವ್ಯಾಪಾರ ಜೋರು:ಕರಾವಳಿಯಲ್ಲಿ ಬಿರು ಬೇಸಿಗೆ ಬೀಳುತ್ತಿರುವುದರಿಂದ ಸೆಕೆ ಜೋರಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಮದ ಸ್ಥಳೀಯರು ರಸ್ತೆಯ ಪಕ್ಕದಲ್ಲಿ ಕಲ್ಲಂಗಡಿ ಹಣ್ಣು, ಕಬ್ಬಿನ ಜ್ಯೂಸ್ ಹಾಗೂ ಇನ್ನಿತರ ತಂಪು ಪಾನೀಯ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆಲ್ಲ ಸ್ಥಳೀಯರ ವ್ಯಾಪಾರ ಕೂಡ ಹೆಚ್ಚಾಗುತ್ತದೆ.ತಾಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿ ಅದರ ಜೊತೆಯಲ್ಲಿ ದೂರದಿಂದ ಬರುವ ಪ್ರವಾಸಿಗರು ತಮ್ಮ ರಕ್ಷಣೆಯ ಬಗ್ಗೆಯೂ ಜಾಗೃತಿ ವಹಿಸಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮದು: ಚಂದ್ರಶೇಖರ ನರಸಿಂಹ ಹೆಗಡೆ
ಕಾಟಾಚಾರಕ್ಕೆ ಮರುಪರಿಶೀಲನೆ ಪ್ರಕ್ರಿಯೆ: ಡಾ. ನಾಗೇಶ ನಾಯ್ಕ ಕಾಗಾಲ ಆರೋಪ