ನಾಳೆ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Apr 02, 2024, 01:07 AM IST
ಏ.೩ ರಂದು ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ : ಸಿಎಂ, ಡಿಸಿಎಂ   ಭಾಗಿ  | Kannada Prabha

ಸಾರಾಂಶ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಏ.೩ ರಂದು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಏ.೩ ರಂದು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಭುವನೇಶ್ವರಿ ವೃತ್ತದಿಂದ ತೆರೆದ ವಾಹನದಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ಸತೀಶ್ ಜಾರಕಿ ಹೊಳಿ, ಡಾ.ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ರೋಡ್ ಕಾರ್ನರ್‌ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯಿಂದ ೧೦ ರಿಂದ ೧೫ ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಈಗಾಗಲೇ ಒಂದು ಸುತ್ತಿನ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ೫ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಲ್ಲದೇ ರಾಜ್ಯದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ತೊರೆದು ಅನೇಕರು ಕಾಂಗ್ರೆಸ್ ಸೇರ್ಪಡೆ:

ಈಗಾಗಲೇ ಬಿಜೆಪಿಯ ಅನೇಕ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಅವರ ಸಹೋದರ ಎ.ಆರ್.ಬಾಲರಾಜ್ ಹಾಗೂ ಬಿಜೆಪಿ ಮುಖಂಡ ಅಯ್ಯನಪುರ ಶಿವಕುಮಾರ್ ಅವರು ನನ್ನನ್ನು ಸಂಪರ್ಕ ಮಾಡಿದ್ದು ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಿ.ಮರಿಸ್ವಾಮಿ ಹೇಳಿದರು.

ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು:

ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ೧ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ ಎಂಬ ವಿಶ್ವಾಸವನ್ನು ಮರಿಸ್ವಾಮಿ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ೨೦ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಚಾ.ನಗರ ಮೊದಲನೇ ಗೆಲುವಾಗಿದೆ. ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ೭ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಇನ್ನೊಂದು ಹನೂರಿನಲ್ಲಿ ನಮಗೆ ಹೆಚ್ಚಿನ ಲೀಡ್ ಬರಲಿದೆ. ದಿ. ಆರ್. ಧ್ರುವನಾರಾಯಣ ಅವರು ಮಾಡಿರುವ ಅಭಿವೃದ್ದಿ, ಜಿಲ್ಲೆಗೆ ಸಿದ್ದರಾಮಯ್ಯ ಅವರು ನೀಡಿರುವ ಕೊಡುಗೆಗಳು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಿದೆ ಎಂದು ಮರಿಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಆರ್.ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಮಹಮ್ಮದ್ ಅಸ್ಗರ್, ಪತ್ರಿಕಾ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!