ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ ಮತ್ತು ಶುಭ ಶುಕ್ರವಾರದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು. ಸಂತ ಮೇರಿ ಶಾಲಾವರಣದಲ್ಲಿ ಪ್ರಾರ್ಥನಾ ಕೂಟವನ್ನು ದೇವಾಲಯದ ಧರ್ಮಗುರುಗಳಾದ ಅರುಳ್ ಸೇಲ್ವಕುಮಾರ್ ಹಾಗೂ ಸಹಾಯಕ ಗುರು ನವೀನ್ ಕುಮಾರ್ ನೇರವೇರಿಸಿದರು.ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಕ್ರೈಸ್ತ ಭಾಂದವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡಿದ್ದರು. ಪವಿತ್ರ ಗುರುವಾರ ಕಡೆಯ ಭೋಜನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆ ಹಾಗೂ ಪ್ರಭುಕ್ರಿಸ್ತರು ತಾವು ಮರಣಹೊಂದುವ ಮುನ್ನದಿನ ತಮ್ಮ ಶಿಷ್ಯರೊಂದಿಗೆ ಕಡೆಯ ಭೋಜನಕ್ಕೂ ಮುನ್ನ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ಸ್ಮರಣೆಯನ್ನು ದೇವಾಲಯದ ಧರ್ಮಗುರು ಅರುಳ್‌ಸೇಲ್ವಕುಮಾರ್, ಸಹಾಯಕ ಧರ್ಮಗುರು ನವೀನ್‌ಕುಮಾರ್, ಕ್ರೈಸ್ತ ಭಾಂದವರ ಪಾದಗಳನ್ನು ತೊಳೆಯುವ ಮೂಲಕ ನೆನಪಿಸಿದರು. ನಂತರ ಮಧ್ಯರಾತ್ರಿ ವರೆಗೆ ವಿಶೇಷ ಪ್ರಾರ್ಥನೆ, ಧ್ಯಾನಗಳಲ್ಲಿ ಕ್ರೈಸ್ತ ಭಾಂದವರು ತೊಡಗಿಸಿಕೊಂಡಿದ್ದರು.
ಶುಭಶುಕ್ರವಾರದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.ಬೆಳಗ್ಗಿನಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳನ್ನು ದೇವಾಲಯದ ಧರ್ಮಗುರು ಹಾಗೂ ಕನ್ಯಾಸ್ತ್ರೀಯರು ನೇರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಭಾಂದವರು ಪಾಲ್ಗೊಂಡಿದ್ದರು. ಮಧ್ಯಾಹ್ನ 1.45ಕ್ಕೆ ದೇವಾಲಯದಿಂದ ಶಿಲುಬೆ ಮೆರವಣಿಗೆ ನಡೆಯಿತು. ಕ್ರಿಸ್ತರ ಶಿಲುಬೆಯಾತನೆಯನ್ನು ಸ್ಮರಿಸುತ್ತಾ, ಪ್ರಾರ್ಥನೆ ಹಾಗೂ ಆರಾಧನೆ ನಡೆಯಿತು.
ಸಹನಾ ಮೂರ್ತಿ ಪ್ರಭುಕ್ರಿಸ್ತರು ಜಗದರಕ್ಷಕನಾಗಿ ಹುಟ್ಟಿದ ಬಂದು ಪರಸ್ಪರ ಪ್ರೀತಿ, ಶಾಂತಿ ತ್ಯಾಗವನ್ನು ಕಲಿಸಿಕೊಟ್ಟು ಅದರಂತೆ ಉಸಿರಿನ ಕೊನೆಯವರಗೂ ಜೀವಿಸಿದ್ದರು. ಶಿಲುಬೆಯಲ್ಲಿ ಪ್ರಾಣವನ್ನು ತ್ಯಾಗ ಮಾಡುವ ಸಂದರ್ಭದಲ್ಲೂ ಶತ್ರಗಳನ್ನು ಕ್ಷಮಿಸಿ, ದ್ವೇಷಿಸದೆ, ಪ್ರೀತಿಸುವ ಪರಿಪಾಠವನ್ನು ತನ್ನ ಶಿಷ್ಯರ ಮೂಲಕ ಇಡೀ ಜಗತ್ತಿಗೆ ಸಾರಿದರು. ಭೂಲೋಕದಲ್ಲಿ ಮಾನವರ ರಕ್ಷಣೆಗಾಗಿ ಮಾನವರು ಎಸಗಿದ ಪಾಪಗಳಿಗಾಗಿ ಶಿಲುಬೆಯಲ್ಲಿ ಕ್ರೂರವಾದ ನೋವು, ಕಷ್ಟ, ಹಿಂಸೆ ಹಾಗೂ ನಿಂದನೆಗಳನ್ನು ಅನುಭವಿಸಿದ ಈ ದಿನವನ್ನು ಶುಭ ಶುಕ್ರವಾರ ದಿನವನ್ನಾಗಿ ಆಚರಿಸಲಾಗುತ್ತದೆ. ಶುಭ ಶುಕ್ರವಾರದ ಹಿಂದಿನ 40 ದಿನಗಳು ಕ್ರೈಸ್ತ ಭಾಂದವರು ಉಪವಾಸ, ಪ್ರಾರ್ಥನೆ ನಡೆಸುತ್ತಾರೆ.ಧರ್ಮಗುರು ಅರುಳ್ ಸೇಳ್ವಕುಮಾರ್, ಸಹಾಯಕರಾದ ನವೀನ್ ಕುಮಾರ್ ಅವರು 2 ದಿನದ ಸಾಂಘ್ಯವನ್ನು ನೇರವೇರಿಸಿದರು. ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀಯರು, ಕಾನ್ವೆಂಟಿನ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಭಾಂದವರು ನೆರೆದಿದ್ದರು.