ಸುಂಟಿಕೊಪ್ಪ: ೨೯, ೩೦ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : May 27, 2026, 03:00 AM IST
 ಮೇ೨೯ ಮತ್ತು ೩೦ರಂದು ಸುಂಟಿಕೊಪ್ಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ | Kannada Prabha

ಸಾರಾಂಶ

೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ೨೯ ಮತ್ತು ೩೦ರಂದು ಸುಂಟಿಕೊಪ್ಪದ ಎಸ್.ಎಸ್. ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದರು.

ಮಡಿಕೇರಿ: ೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ೨೯ ಮತ್ತು ೩೦ರಂದು ಸುಂಟಿಕೊಪ್ಪದ ಎಸ್.ಎಸ್. ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಅಬ್ದುಲ್ ರಶೀದ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಮೇ ೨೯ರಂದು ಬೆಳಗ್ಗೆ ೮ ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗುವುದು. ಸುಂಟಿಕೊಪ್ಪದ ಹಿರಿಯ ಸಮಾಜ ಸೇವಕರ ಸ್ಮರಣಾರ್ಥ ೧೯ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ ೯ ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ಕಲಾ ತಂಡ, ಕಲಶ, ವಾದ್ಯ ತಂಡಗಳೊಂದಿಗೆ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಡಿ.ಎನ್. ಕೃಷ್ಣಯ್ಯ ಮಹಾದ್ವಾರ, ಜಿ.ಟಿ. ನಾರಾಯಣ್ ರಾವ್ ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಗಣ್ಯರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಬೆಳಗ್ಗೆ ೧೦.೩೦ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ನೆರವೇರಿಸುವರು. ಸಾಹಿತ್ಯ ಸೌಹಾರ್ದ ಸ್ಮರಣ ಸಂಚಿಕೆಯನ್ನು ಸಚಿವ ಬೋಸರಾಜು, ವಿವಿಧ ಕೃತಿಗಳನ್ನು ಸಚಿವ ಶಿವರಾಜ ತಂಗಡಗಿ, ಶಾಸಕ ಎ.ಎಸ್. ಪೊನ್ನಣ್ಣ ಬಿಡುಗಡೆಗೊಳಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ವಿಧಾನಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ. ಬೋಪಯ್ಯ, ಮಾಜಿ ಸಚಿವರಾದ ಅಪ್ಪಚ್ಚು ರಂಜನ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಉಪಸ್ಥಿತರಿರುವರು. ಮುಖ್ಯ ಭಾಷಣಕಾರರಾಗಿ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡುವರು. ಸಮ್ಮೇಳನದ ಅಧ್ಯಕ್ಷರಾದ ಅಬ್ದುಲ್ ರಶೀದ್ ಅವರು ತಮ್ಮ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ. ರಮೇಶ್ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮದ ನಂತರ ಜಿಲ್ಲೆಯ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವೈದ್ಯರು ಮತ್ತು ಸಾಹಿತಿಗಳಾದ ಡಾ. ಕೆ.ಬಿ .ಸೂರ್ಯ ಕುಮಾರ್ ವಹಿಸುವರು. ಕೊಡಗು ಕಂಡ ಮಹಿಳಾ ಸಾಹಿತಿಗಳು ಮತ್ತು ಅವರ ಕೃತಿಗಳು ವಿಚಾರವಾಗಿ ಸಾಹಿತಿ ಎನ್.ಕೆ. ಮಾಲಾದೇವಿ ಮೂರ್ತಿ ಉಪನ್ಯಾಸ ನೀಡುವರು. ಸಂಜೆ ೬ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.ಮೇ೩೦ರ ಬೆಳಗ್ಗೆ ಬೆಳಗ್ಗೆ ೧೦ ಗಂಟೆಗೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊ. ಕೋಡಿರ ಲೋಕೇಶ್ ಮೊಣ್ಣಪ್ಪ ವಹಿಸುವರು. ಕನ್ನಡ ಕಥಾ ಜಗತ್ತು ಮತ್ತು ಕೊಡಗು ಕುರಿತು ಸಾಹಿತಿ ಡಾ. ಜೆ ಸೋಮಣ್ಣ, ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಕೃಷಿ ವಿಜ್ಞಾನಿ ಡಾ. ಮುರುಳಿಧರ್ ಮಾತನಾಡುವರು. ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸುವ ದಾರಿ ಕುರಿತು ಆರ್.ಕೆ. ಬಾಲಚಂದ್ರ ಅವರು ಮಾತನಾಡಲಿದ್ದು, ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲತೆಗಳ ಕುರಿತು ಚೆಪ್ಪುಡಿರ ಕಾರ್ಯಪ್ಪ ಅವರು ಮಾತನಾಡಲಿದ್ದಾರೆ. ಅಪರಾಹ್ನ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕೃಪಾ ದೇವರಾಜ್ ವಹಿಸಲಿದ್ದಾರೆ.

ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮಂತರ ಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಉಪಾಧ್ಯಕ್ಷ ಎ. ಲೋಕೇಶ್ ಕುಮಾರ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸಬಾಸ್ಟಿನ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಬಿ.ಸಿ. ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆಯಲ್ಲಿ ಜು. 22ರಿಂದ ‘ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್’
‘ತುಡುವೆ ಜೇನು’ ರಕ್ಷಣೆ ಚಿಂತನೆ: ಗಿರಿಜನರಿಗೆ ಚಿಂತೆ!