ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸರ್ಕಾರಿ ಪ್ರೌಡ ಶಾಲೆಯಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಮಕ್ಕಳಿಗೆ ಕಾನೂನು ಮಾಹಿತಿ ಕಾರ್ಯಕ್ರಮ ಪೊಲೀಸ್ ಇಲಾಖೆಯಿಂದ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಮಕ್ಕಳನ್ನುದ್ದೇಶಿಸಿ ಮಾತನಾಡಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಮಾಹಿತಿ ನೀಡಿದರು. ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದರು. ರಸ್ತೆ ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸದಿದ್ದಾಗ ರಸ್ತೆ ಅಪಘಾತ ಸಂಭವಿಸುತ್ತದೆ. ರಸ್ತೆ ಅಪಘಾತದಲ್ಲಿ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಮತ್ತು ಪೊಲೀಸ್ ಇಲಾಖೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪ್ರತಿಯೊಬ್ಬರೂ ಕೂಡ ಕಾನೂನನ್ನು ಪರಿಪಾಲಿಸುವ ಮೂಲಕ ವಾಹನ ಸಂಚಾರ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು. ಮಕ್ಕಳು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ತೆರಳುವ ಸಂದರ್ಭ ರಸ್ತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಾಲನೆ ಮಾಡುವ ವೇಳೆ ಮೊಬೈಲ್‌ನಲ್ಲಿ ಮಾತನಾಡಬಾರದು. ಕಾರು ಚಾಲಕರು ಸೀಟು ಬೆಲ್ಟ್ ಧರಿಸಬೇಕು. ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ಶಿಕ್ಷಣ ಪಡೆಯಬೇಕೆ ವಿನ: ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು, ಸಮಾಜದಲ್ಲಿ ಕಾನೂನು ಪಾಲಿಸದ ಯುವಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ತುರ್ತು ಸಂದರ್ಭ ಪೊಲೀಸ್ ಇಲಾಖೆಯಿಂದ ನೀಡಲಾದ ಸಂಖ್ಯೆಗೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್, ಜೆಸಿಐ ಅಧ್ಯಕ್ಷ ಸಂಪತ್‌ಕುಮಾರ್, ಸದಸ್ಯರಾದ ದೇವಿ ಪ್ರಸಾದ್ ಕಾರ‍್ಮಾರ್, ಡೆನ್ನೀಸ್ ಡಿಸೋಜ, ಪೆಲ್ಸಿಡಿಸೋಜ, ಅರುಣ್‌ಕುಮಾರ್, ಸತೀಶ್‌ಕುಮಾರ್, ಪ್ರನೀತ್, ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕಿಯರು ವಿದಾರ್ಥಿಗಳು ಉಪಸ್ಥಿತರಿದ್ದರು.