ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿದ್ಯಾರ್ಥಿಗಳು ಈ ಬಿರದಲ್ಲಿ ಪಡೆದುಕೊಂಡ ತರಬೇತಿ ಮತ್ತು ಅನುಭವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ದೇಶದ ಅತ್ಯುತ್ತಮ ಪ್ರಜೆಗಳಾಗಿ ರೂಪುಗೊಂಡು ಪೋಷಕರಿಗೆ ಹೆಮ್ಮೆ ತರಬೇಕು ಎಂದು ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಆಹ್ಮದ್ ಅಭಿಪ್ರಾಯಪಟ್ಟರು.ಶುಕ್ರವಾರ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಯುವ ಜನತೆಯನ್ನು ಮಾದಕ ವಸ್ತುಗಳ ವ್ಯಸನಿಗಳಾಗದಂತೆ ಕಾಪಾಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬದಲಾದ ಕಾಲಘಟ್ಟದಲ್ಲಿ ಜೀವನದ ಆಧುನಿಕ ಶೈಲಿಯ ಅನುಕರಣೆಯಲ್ಲಿ ಬಹುತೇಕ ಯುವಜನತೆಯ ಜೀವನ ಕ್ರಮವೂ ಕೂಡ ಬದಲಾಗುತ್ತಿದೆ. ಮಾದಕವಸ್ತುಗಳ ಸೇವನೆಯಿಂದ ಅಮೂಲ್ಯವಾದ ಬದುಕು ನಾಶವಾಗುತ್ತಿದೆ. ಸಮಾಜದ ಸತ್ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.ಉಪನ್ಯಾಸಕ ಹಾಗೂ ಪತ್ರಕರ್ತರಾಗಿರುವ ಎಂ.ಎಸ್. ಸುನಿಲ್ ಮಾತನಾಡಿ ಶಿಬಿರಾರ್ಥಿಗಳು ತಾವು ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಬಿರವು ಕಲಿಸಿದ ಸಹಬಾಳ್ವೆ ಸಹೋದರತ್ವ ಮತ್ತು ತಾಳ್ಮೆಯನ್ನು ಜೀವನದ ಎಲ್ಲ ಹಂತಗಳಲ್ಲಿ ಪಾಲಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಜಿ. ಮಂದಪ್ಪ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವು ಯಶಸ್ವಿಯಾಗಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರೆ ಎಂದರು.ಶಿಬಿರಾಧಿಕಾರಿ ಎನ್.ಎನ್. ಮನೋಹರ್ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಎಂ. ಸಂಪತ್‌ಕುಮಾರ್ ಉಪಸ್ಥಿತರಿದ್ದರು.