ಕನ್ನಡಪ್ರಭ ವಾರ್ತೆ ಲೋಕಾಪುರ
ಪ್ರಾಯೋಗಿಕವಾಗಿ ಆರಂಭಿಸಿರುವ ವಾರ್ಡುಗಳ ನಲ್ಲಿಗಳಲ್ಲಿ ದುರ್ವಾಸನೆ ಭರಿತ, ಕಾಫಿ ಬಣ್ಣದ ನೀರು ಪೂರೈಕೆ ಆಗುತ್ತಿದೆ. ಹಲವು ದಿನಗಳಿಂದ ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಜನರ ಆರೋಪ.
ಸರ್ಕಾರ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾಕಷ್ಟು ಅನುದಾನ ನೀಡಿದರೂ ಪಪಂ ಅಧಿಕಾರಿಗಳು ಅಧಿಕಾರಿಗಳು ಕುಡಿಯುವ ಫಿಲ್ಟರ್ ಮಾಡದೇ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಫಿಲ್ಟರ್ ಮಾಡಿದ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ೧ನೇ ವಾರ್ಡಿನ ಜನರು ಒತ್ತಾಯಿಸಿದ್ದಾರೆ.ಕಲುಷಿತ ನೀರು ಪೂರೈಕೆಗೆ ಆಕ್ರೋಶಗೊಂಡ ಸ್ಥಳೀಯರು ಗುರುವಾರ ಪಟ್ಟಣ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣ ಪಂಚಾಯಿತಿಯವರು ವರ್ಚಗಲ್ ಕೆರೆಯಿಂದ ಫಿಲ್ಟರ್ ಮಾಡದೇ ಕಲುಷಿತ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ನೀರು ದುರ್ವಾಸನೆ ಬೀರುತ್ತಿದೆ. ಹಲವು ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಪಟ್ಟಣ ಪಂಚಾಯಿತಿ ಅಧಿಕಾರಿಗೆ ತಿಳಿಸಿದ್ದರೂ ಗಮನ ಹರಿಸುತ್ತಿಲ್ಲ. ಈ ನೀರನ್ನು ಕುಡಿದು ಯಾವುದೇ ಅನಾಹುತ ಆದರೆ ಅದಕ್ಕೆ ಪಪಂ ಅಧಿಕಾರಿಗಳು, ತಹಸೀಲ್ದಾರರೇ ನೇರ ಹೊಣೆಗಾರರು. ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು.
ವರ್ಚಗಲ್ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಕಲುಷಿತ ನೀರು ಪೂರೈಕೆಯಾಗುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಎಲ್ಲ ವಾಟರ್ ಮನ್‌ಗಳ ಜೊತೆಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.