ಎಐ ಮೂಲಕ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಪೂರೈಕೆ

KannadaprabhaNewsNetwork |  
Published : Sep 12, 2025, 01:00 AM IST
11ಡಿಡಬ್ಲೂಡಿ3ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸುಧಾರಿಸಲು ಕೃತಕ ಬುದ್ಧಿಮತ್ತೆಯ (ಎಐ) ಮೂಲಕ ವೇದಿಕೆ ಸಿದ್ಧಗೊಂಡಿದ್ದು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಈ ಕುರಿತ ಫಲಕಗಳನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಕೈಗಾರಿಕಾ ವಲಯಗಳ ಸುತ್ತಮುತ್ತ 30 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಉದ್ಯೋಗದಾತರಿಗೆ ಹೊಂದಿಕೆಯಾಗುವ ಪ್ರೋಫೈಲ್‌ಗಳು ಲಭ್ಯವಾದ ತಕ್ಷಣ ಐಟಿಐ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ಮತ್ತು ಖಾಯಂ ಉದ್ಯೋಗಗಳನ್ನು ತ್ವರಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಒದಗಿಸುವುದು ಈ ಪ್ರಾಯೋಗಿಕ ಕಾರ್ಯಕ್ರಮದ ಉದ್ದೇಶ.

ಧಾರವಾಡ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಹುಬ್ಬಳ್ಳಿ- ಧಾರವಾಡದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆಯ (ಎಐ) ಮೂಲಕ ವೇದಿಕೆಯೊಂದನ್ನು ಸೃಷ್ಟಿಸಿದೆ.

ಎಐ ಬಳಸಿಕೊಂಡು ಏಕ್ ಸ್ಟೆಪ್ ಫೌಂಡೇಶನ್‌ದೊಂದಿಗೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಈ.ವಿ. ರಮಣರೆಡ್ಡಿ ಮಾತನಾಡಿ, ಕೈಗಾರಿಕಾ ವಲಯಗಳ ಸುತ್ತಮುತ್ತ 30 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಉದ್ಯೋಗದಾತರಿಗೆ ಹೊಂದಿಕೆಯಾಗುವ ಪ್ರೋಫೈಲ್‌ಗಳು ಲಭ್ಯವಾದ ತಕ್ಷಣ ಐಟಿಐ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ಮತ್ತು ಖಾಯಂ ಉದ್ಯೋಗಗಳನ್ನು ತ್ವರಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಒದಗಿಸುವುದು ಈ ಪ್ರಾಯೋಗಿಕ ಕಾರ್ಯಕ್ರಮದ ಉದ್ದೇಶ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿನ ಸರ್ಕಾರಿ ಐಟಿಐಗಳಲ್ಲಿ ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಬಳಸಿಕೊಂಡು, ಪ್ರಾಂಶುಪಾಲರು ಮತ್ತು ಉದ್ಯೋಗಾಧಿಕಾರಿಗಳು ಪರಿಶೀಲಿಸಿದ 1,100 ಕ್ಕೂ ಹೆಚ್ಚು ಬ್ಲೂ ಡಾಟ್ (ಐಟಿಐ ಅಂತಿಮ ವರ್ಷದ ವಿದ್ಯಾರ್ಥಿಗಳ ಡಿಜಿಟಲ್ ಪ್ರೋಫೈಲ್‌ಗಳು) ರಚಿಸಲಾಗಿದೆ. ಇದಲ್ಲದೇ ಮೊಬೈಲ್ ಅಪ್ಲಿಕೇಶನ್ ಬಳಸಿ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಪ್ರೋಫೈಲ್‌ಗಳನ್ನು ಮಾರ್ಪಡಿಸುವ ಮತ್ತು ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆರು ಕೈಗಾರಿಕಾ ಸಂಘಗಳು ಈ ಪ್ರಾಯೋಗಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರೊಫೈಲ್‌ಗಳ ಪೈಕಿ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಜಿಲ್ಲೆಯ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅವುಗಳ ಕೊಡುಗೆ ಅನಿವಾರ್ಯ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಯುವಕರು ಉದ್ಯೋಗ ಸೃಷ್ಟಿಕರ್ತರಾಗಲು ಪ್ರೇರೇಪಿಸಲು ಸ್ಟಾರ್ಟ್ಅಪ್‌ಗಳಿಗೆ ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.

ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರಾದ ರಾಗಪ್ರೀಯಾ ಮಾತನಾಡಿ, ರಾಜ್ಯದ ಐಟಿಐಗಳಿಂದ ಪ್ರತಿ ವರ್ಷ ಸುಮಾರು 70 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಆದರೆ, ಅವರಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು, ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯದ ಕೊರತೆಯಿದೆ. ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡುವುದು ಮತ್ತು ವೃತ್ತಿಪರ ನೀತಿ ಸಂಹಿತೆ ಹಾಗೂ ತಾಳ್ಮೆಯಂತಹ ಮೃದು ಕೌಶಲ್ಯಗಳನ್ನು ಬೆಳೆಸುವುದು ಅವಶ್ಯಕವಾಗಿದೆ ಎಂದರು.

ಜಿಪಂ ಸಿಇಓ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಏಕಸ್ಟೆಪ್ ಡೈರೆಕ್ಟರ್ ವಿದ್ಯಾಸಾಗರ, ಪ್ರೋಗ್ರಾಂ ಹೆಡ್ ಆದರ್ಶ ವಿಜಯಕುಮಾರ, ರವೀಂದ್ರ ದ್ಯಾಬೇರಿ ಸೇರಿದಂತೆ ಬ್ಲೂಡಾಟ್ ರಚನೆ ಹಾಗೂ ಕೃತಕ ಬುದ್ಧಿಮತ್ತೆಯಲ್ಲಿ ನೋಂದಾಯಿತರಾದ ಧಾರವಾಡ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ