24x7 ನೀರಿನ ಕಾಮಗಾರಿಗೆ ಸಹಕಾರ ನೀಡಿ: ಡಾ. ಈಶ್ವರ ಉಳ್ಳಾಗಡ್ಡಿ

KannadaprabhaNewsNetwork | Published : Jun 3, 2024 12:30 AM

ಸಾರಾಂಶ

ಪಾಲಿಕೆ ಆಯುಕ್ತರು ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಅನುಮತಿ ಬಾಕಿ ಇರುವ ಮಾಹಿತಿ ಪಡೆದು ಅದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಜಂಟಿ ಕ್ಷೇತ್ರ ಭೇಟಿ ಹಮ್ಮಿಕೊಳ್ಳುವ ಹಾಗೂ ಸಂಬಂಧಿಸಿದ ತುರ್ತು ಕ್ರಮಕೈಗೊಳ್ಳುವ ಕುರಿತು ಇಲಾಖಾ ಮುಖ್ಯಸ್ಥರೊಂದಿಗೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

24x7 ನೀರು ಸರಬರಾಜು ಯೋಜನೆಯ ಕಾಮಗಾರಿ ವೇಗ ಹೆಚ್ಚಿಸಲು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಭವನದಲ್ಲಿ ಶನಿವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಯಿತು.

ವಿಶ್ವಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ ಅಡಿ ಮಹಾನಗರದಲ್ಲಿ 24x7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ವಿತರಣಾ ಜಾಲದ ಪೈಪ್‌ಲೈನ್ ಕಾಮಗಾರಿ ನಿರ್ವಹಿಸುವಾಗ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಹೆಸ್ಕಾಂ, ಮಹಾನಗರ ಪಾಲಿಕೆ, ಬಿಆರ್‌ಟಿಎಸ್, ಸ್ಮಾರ್ಟ್‌ಸಿಟಿ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿ ಕೂಡ ಪೈಪ್‌ಲೈನ್ ಕಾಮಗಾರಿ ಬರುವುದರಿಂದ ವಿವಿಧ ಇಲಾಖೆಗಳ ಅನುಮತಿ ಪಡೆದು ಅವರ ಸಹಯೋಗದೊಂದಿಗೆ ಅನುಷ್ಠಾನ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಇಲಾಖೆಗಳಿಂದ ಅನುಮತಿ ಬಾಕಿ ಇರುವ ಮಾಹಿತಿ ಪಡೆದು ಅದಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಜಂಟಿ ಕ್ಷೇತ್ರ ಭೇಟಿ ಹಮ್ಮಿಕೊಳ್ಳುವ ಹಾಗೂ ಸಂಬಂಧಿಸಿದ ತುರ್ತು ಕ್ರಮಕೈಗೊಳ್ಳುವ ಕುರಿತು ಇಲಾಖಾ ಮುಖ್ಯಸ್ಥರೊಂದಿಗೆ ಚರ್ಚಿಸಿದರು. 24x7 ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಆದ್ಯತೆಯ ಮೇರೆಗೆ ಮುಗಿಸಲು ಅಗತ್ಯ ಸಹಕಾರ ನೀಡುವುದಾಗಿ ವಿವಿಧ ಇಲಾಖೆಗಳು ತಿಳಿಸಿದರು.

ಎಲ್ ಆ್ಯಂಡ್‌ ಟಿ ವಿವಿಧ ಇಲಾಖೆಗಳೊಂದಿಗೆ ಅಗತ್ಯ ಸಹಕಾರ ಪಡೆದು ತಕ್ಷಣ ಕಾರ್ಯಪ್ರವೃತ್ತರಾಗಲು ಸೂಚಿಸಿದ ಆಯುಕ್ತರು, ಸೈಕ್ ಸಮಾಲೋಚಕರು ಹಾಗೂ ಕೆಯುಐಡಿಎಫ್‌ಸಿ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳ ಪ್ರಗತಿ ಸಾಧಿಸಲು ಸೂಚಿಸಿದರು.

ಈ ವೇಳೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಹು-ಧಾ ಮಹಾನಗರ ಪಾಲಿಕೆ, ಬಿಆರ್‌ಟಿಎಸ್, ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಕುಸ್ಟೆಂಪ್ ಯೋಜನಾ ಅನುಷ್ಠಾನ ಘಟಕದ ಕಾರ್ಯನಿರ್ವಾಹಕ ಎಂಜನಿಯರ್‌ ಸುನೀಲ ಸಾಲಿ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

Share this article