ಧಾರವಾಡ:
ಬರೋಬ್ಬರಿ ಎರಡು ದಶಕಗಳಿಂದ ಒಬ್ಬರೇ ಸಂಸದರನ್ನು ಆಯ್ಕೆ ಮಾಡಿಕೊಂಡು ಬರುತ್ತಿದ್ದು ಅಭಿವೃದ್ಧಿ ನಿಂತ ನೀರಾಗಿದೆ. ಈ ಕಾರಣದಿಂದ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಬ್ಬೇನೂರ, ಹಾರೋಬೆಳವಡಿ, ಅಮ್ಮಿನಭಾವಿ, ಕುರುಬಗಟ್ಟಿ, ಮಂಗಳಗಟ್ಟಿ ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಿದ ಅವರು, 20 ವರ್ಷಗಳ ಕಾಲ ಆಡಳಿತ ನಡೆಸಿದರೂ ಸರಿಯಾಗಿ ಸಂಸದರ ನಿಧಿ ಬಳಕೆಯಾಗಿಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಸಂಸದರು ತುಂಬಾ ನಿರ್ಲಕ್ಷಿಸಿದ್ದಾರೆ. ಈ ಮೊದಲು ಮಾಡಿದ ತಪ್ಪು ಮತ್ತೊಮ್ಮೆ ಮಾಡುವುದು ಬೇಡ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಅಮ್ಮಿನಭಾವಿ ಗ್ರಾಮದ ಶ್ರೀಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಅಸೂಟಿ, ಕಲ್ಮೇಶ್ವರ ಹಾಗೂ ಬಸವೇಶ್ವರ ದೇವಾಲಯಗಳಿಗೂ ಭೇಟಿ ನೀಡಿದರು. ಕಬ್ಬೇನೂರ ಗ್ರಾಮದ ಶ್ರೀ ಮಾರುತಿ ಹಾಗೂ ದ್ಯಾಮವ್ವದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಮಂಗಳಗಟ್ಟಿ ಗ್ರಾಮದ ಜಗದ್ಗುರು ರೇಣುಕಾಚಾರ್ಯ ಮಂಗಲ ಭವನ, ಬೀರಲಿಂಗೇಶ್ವರ ಮತ್ತು ಮರೆಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಕುರುಬಗಟ್ಟಿ ಶ್ರೀ ಮಾರುತಿ ದೇವಸ್ಥಾನಕ್ಕೆ ಭೇಟಿ ನೀಡಿದರು.ಈ ವೇಳೆ ಮಾತನಾಡಿದ ಶಿವಲೀಲಾ ಕುಲಕರ್ಣಿ, ಕಾಂಗ್ರೆಸ್ ಸರ್ಕಾರ ಮಹಿಳೆಯರು, ಬಡವರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಬೇಕಾದ ಭಾಗ್ಯಗಳನ್ನು ಗ್ಯಾರಂಟಿ ಮೂಲಕ ನೀಡಿದೆ. ಆದರೆ, ಬಿಜೆಪಿ ಕಾಲದಲ್ಲಿ ಬರೀ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಇಡೀ ದೇಶಾದ್ಯಂತ ಕಾಂಗ್ರೆಸ್ ಬೆಂಬಲಿಸಿ ಸಮತೋಲನ ಅಧಿಕಾರ ಜಾರಿಗೆ ಬರುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಅರವಿಂದ ಏಗನಗೌಡ್ರ, ಈಶ್ವರ ಶಿವಳ್ಳಿ, ಗಿರಿಮಲ್ಲಯ್ಯ ನಂದಿಕೋಲಮಠ, ಸಿದ್ದಪ್ಪ ಪ್ಯಾಟಿ ಮತ್ತು ಪಕ್ಷದ ಹಿರಿಯರು, ಅಮ್ಮಿನಭಾವಿ, ಕಬ್ಬೇನೂರ, ಹಾರೋಬೆಳವಡಿ ಗ್ರಾಮದ ನಾಗರಿಕರಿದ್ದರು. ಪ್ರಸ್ತುತ ರಾಜಕೀಯ ಕಲುಷಿತಗೊಂಡಿದೆ. ಬಿಜೆಪಿಯಂತೂ ಕೀಳುಮಟ್ಟಕ್ಕೆ ಇಳಿದು ರಾಜಕೀಯ ಮಾಡುತ್ತಿದೆ. ರಾಜಕೀಯವೆಂದರೆ ಸೇವಕನಾಗಿ ಜನರ ಸೇವೆ ಮಾಡುವುದು. ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ ಎಂದು ವಿನೋದ ಅಸೂಟಿ ಹೇಳಿದರು.