ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಬೆಂಬಲಿಸಿ

KannadaprabhaNewsNetwork | Published : Apr 17, 2024 1:21 AM

ಸಾರಾಂಶ

ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಪಕ್ಷವನ್ನು ಮತದಾರರು ಬೆಂಬಲಿಸಬೇಕು. ಬಿಜೆಪಿ ಒಂದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಪಕ್ಷವನ್ನು ಮತದಾರರು ಬೆಂಬಲಿಸಬೇಕು. ಬಿಜೆಪಿ ಒಂದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯಪುರ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಗ್ರಾಮಗಳಲ್ಲಿರುವ ಸಾಮರಸ್ಯ ಪಟ್ಟಣಗಳಲ್ಲಿ ಇಲ್ಲ. ಸಾಮರಸ್ಯದ ಕೊರತೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಈ ಮೊದಲು ಮಿಲಿಟರಿಯಲ್ಲಿ ಜಾತಿ ಇರಲಿಲ್ಲ. ಅಲ್ಲಿಯೂ ಜಾತಿ ಬೆರೆಸಲಾಗಿದೆ. ಪ್ರಜಾಪ್ರಭುತ್ವ ಅಳಿವಿನ ಅಂಚಿಗೆ ಹೋಗಬಾರದು. ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬೆಂಬಲಿಸಬೇಕು ಎಂದರು.

ಕಳೆದ ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡಲಾಗುವುದು, ಅವರ ಬೆಳೆಗೆ ಸೂಕ್ತ ಬೆಲೆ, ಕಪ್ಪು ಹಣದಿಂದ ಪ್ರತಿಯೊಬ್ಬರ ಖಾತೆಗೆ ₹೧೫ ಲಕ್ಷ, ಪ್ರತಿ ವರ್ಷ ಯುವಜನಾಂಗಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ನೀಡಿರುವ ಅನೇಕ ಭರವಸೆಗಳನ್ನು ಈಡೇರಿಸಿಲ್ಲ. ಯುಪಿಎ ಸರ್ಕಾರ ಅವಧಿಯಲ್ಲಿ ಪ್ರಧಾನಿ ಮನಮೋಹನಸಿಂಗ್‌ ಅವರು ರೈತರ ೭೨ ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ಅದೇ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಉದ್ದಿಮೆದಾರರ ₹೧೪ ಲಕ್ಷ ಕೋಟಿ ಸಾಲಮನ್ನಾ ಮಾಡಿದೆ. ರೈತರ ಬೆಳೆಗೆ ಯೋಗ್ಯ ದರ ನೀಡಲಿಲ್ಲ. ಈಗ ಶ್ರೀಮಂತ-ಬಡವ, ರೈತ-ಕಾರ್ಮಿಕ, ಜಾತಿ ಸಂಘರ್ಷ ಕಡಿಮೆ ಮಾಡಲು ಮತದಾರರು ಬದಲಾವಣೆ ಮಾಡುವ ಅಗತ್ಯವಿದೆ ಎಂದರು.

ನಾನು ವಿಜಯಪುರ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾಗಿದೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಎಲ್ಲ ಜಾತಿಯವರು ನಮ್ಮ ಸರ್ಕಾರ ಸಾಧನೆ ತಿಳಿ ಹೇಳಿದ ರಾಜು ಆಲಗೂರ ಅವರ ಆಯ್ಕೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ರಾಷ್ಟ್ರದ ಅರಿವು ಇರಬೇಕು. ಕಳೆದ ೩೦ ವರ್ಷಗಳಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿರುವ ರಮೇಶ ಜಿಗಜಿಣಗಿ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ರಮೇಶ ಸೂಳಿಭಾವಿ, ಚಂದ್ರಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಬಸವರಾಜ ಸೋಮಪುರ, ಮಲ್ಲಿಕಾರ್ಜುನ ನಾಯಕ, ಪ್ರೇಮಕುಮಾರ ಮ್ಯಾಗೇರಿ, ಎ.ಎಂ.ಪಾಟೀಲ, ಶಂಕರಗೌಡ ಬಿರಾದಾರ, ರವಿ ರಾಠೋಡ,ರಾಜುಗೌಡ ಪಾಟೀಲ, ಶಿವನಗೌಡ ಗುಜಗೊಂಡ, ಜಗದೇವಿ ಗುಂಡಳ್ಳಿ, ನೀಲಾ ಬಿರಾದಾರ, ರಮಜಾನ ಹೆಬ್ಬಾಳ, ಬಂದೇನವಾಜ ಡೋಲಚಿ,ಭೀಮಶಿ ಜಗ್ಗಲ, ಇಲಿಯಾಸ ದೊಡ್ಡಮನಿ, ಮಹಿಬೂಬ ನಾಯ್ಕೋಡಿ, ನಾಗನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು. ರವಿ ರಾಠೋಡ ನಿರೂಪಿಸಿದರು. ದ್ಯಾಮನಗೌಡ ಪಾಟೀಲ ವಂದಿಸಿದರು.

-----

Share this article